ವಾಷಿಂಗ್ಟನ್,ಜು.2- ತನ್ನ ಬಳಿ ಇರುವ ಅಣ್ವಸ್ತ್ರಗಳನ್ನು ನಾಶಪಡಿಸಲು ಉತ್ತರ ಕೊರಿಯ ಮನಸು ಮಾಡಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಜೂ.12ರಂದು ಸಿಂಗಾಪುರದಲ್ಲಿ ಟ್ರಂಪ್ ಮತ್ತು ಉತ್ತರ ಕೊರಿಯ ಅಧ್ಯಕ್ಷ ಕಿಮ್-ಜಂಗ್ ನಡುವೆ ನಡೆದ ಮಾತುಕತೆ ಸಂದರ್ಭದಲ್ಲಿ ಅಣ್ವಸ್ತ್ರ ನಾಶಪಡಿಸುವ ಬಗ್ಗೆ ಒಡಂಬಡಿಕೆಯಾಗಿತ್ತು.
ಆದರೆ ಅಮೆರಿಕ ಮಾಧ್ಯಮಗಳು ಅಣ್ವಸ್ತ್ರ ನಾಶಪಡಿಸುವುದಾಗಿ ಉತ್ತರ ಕೊರಿಯ ಆಶ್ವಾಸನೆ ನೀಡಿದ್ದರೂ ತನ್ನ ಅಣ್ವಸ್ತ್ರಗಳನ್ನು ರಹಸ್ಯವಾಗಿ ಕಾಯ್ದಿಟ್ಟುಕೊಂಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದವು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಟ್ರಂಪ್ ಅವರು, ಉತ್ತರಕೊರಿಯ ವರ್ತನೆ ಬಗ್ಗೆ ಯಾವುದೇ ಅನುಮಾನ ಬೇಡ. ಕಿಮ್-ಜಂಗ್ ಮತ್ತು ನನ್ನ ನಡುವೆ ಉತ್ತಮ ಬಾಂಧವ್ಯವಿದೆ. ಕೊಟ್ಟ ಮಾತಿನಂತೆ ಅವರು ತನ್ನ ಬಳಿ ಇರುವ ಎಲ್ಲ ಅಣ್ವಸ್ತ್ರಗಳನ್ನು ನಾಶಗೊಳಿಸಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.