ಜುಲೈ 10ರೊಳಗೆ ಕಾವೇರಿ ಜಲಾನಯನ ಭಾಗದ ಮುಖಂಡರ ಸಭೆ

 

ಬೆಂಗಳೂರು, ಜು.2-ಕಾವೇರಿಯಿಂದ ಇಂತಿಷ್ಟೇ ನೀರು ಬಿಡಬೇಕೆಂಬ ಒತ್ತಡಗಳು ಕಾವೇರಿ ನೀರು ನಿರ್ವಹಣಾ ಮಂಡಳಿಯಲ್ಲಿ ಕೇಳಿ ಬಂದಿವೆ. ಈ ಬಗ್ಗೆ ಚರ್ಚಿಸಲು ಜುಲೈ 10ರೊಳಗೆ ಕಾವೇರಿ ಜಲಾನಯನ ಭಾಗದ ಮುಖಂಡರ ಸಭೆ ನಡೆಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಜಲಾನಯನ ಭಾಗದ ಸಚಿವರು, ಶಾಸಕರ ಜೊತೆ ಜು.5 ರಿಂದ 10ರೊಳಗೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಇಂದು ಕಾವೇರಿ ಪ್ರಾಧಿಕಾರದ ಸಭೆ ನಡೆದಿದ್ದು, ರಾಜ್ಯದ ಪರವಾದ ವಾದವನ್ನು ಮಂಡಿಸಲಾಗಿದೆ. ರಾಜ್ಯದ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ಜು.5 ರಂದು ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ನಡೆಯಲಿದೆ ಎಂದರು.
ನಮ್ಮ ರೈತರ ಅನುಕೂಲ ನೋಡಿಕೊಂಡು ಅವರ ಹಿತಾಸಕ್ತಿಗೆ ಧಕ್ಕೆಯಾಗದಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ರಾಜ್ಯಕ್ಕೆ ಸಿಗಬೇಕಿರುವ ನ್ಯಾಯದ ಬಗ್ಗೆ ಇಂದಿನ ಸಭೆಯಲ್ಲಿ ನಮ್ಮ ವಾದವನ್ನು ಮಂಡಿಸಲಾಗಿದೆ ಎಂದ ಅವರು, ಕಾವೇರಿ ಜಲಾನಯನ ಭಾಗದ ರೈತರ ಬೇಡಿಕೆಗೆ ತಕ್ಕಂತೆ ನೀರು ಬಿಡುಗಡೆ ವಿಚಾರ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗಿವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ