ನವದೆಹಲಿ, ಜು.1-ಮುಂಬರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ಸಂಕಷ್ಟದಲ್ಲಿರುವ ರೈತರ ಕಣ್ಣೊರೆಸಲು ಮುಂದಾಗಿದ್ದು, ಶೀಘ್ರದಲ್ಲೇ ಭತ್ತಕ್ಕೆ ನಿಗದಿಪಡಿಸಿರುವ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಒಂದು ಕ್ವಿಂಟಾಲ್ ಭತ್ತಕ್ಕೆ 200ರೂ. ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರ ಸರ್ಕಾರ ಸಮ್ಮತಿಸಿದ್ದು, ಕೆಲವೇ ದಿನಗಳಲ್ಲಿ ಈ ಆದೇಶ ಹೊರಬೀಳಲಿದೆ ಎನ್ನಲಾಗಿದೆ.
ಅದೇ ರೀತಿ ಇನ್ನಿತರ 13 ಬೆಳೆಗಳಿಗೂ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ರೈತರ ಬೆಳೆಗೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಚನೆ ನೀಡಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಬೆಂಬಲ ಬೆಲೆ ಹೆಚ್ಚಳ ಕುರಿತಂತೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರೈತರು ಉತ್ಪಾದಿಸುವ ಉತ್ಪನ್ನಗಳ ಕನಿಷ್ಟ ಬೆಂಬಲ ಬೆಲೆಯನ್ನು ಒಂದೂವರೆ ಪಟ್ಟು ಹೆಚ್ಚಿಸುವ ಭರವಸೆ ನೀಡಿತ್ತು.
ಮತ್ತೆ 2019ರಲ್ಲಿ ಲೋಕಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಈ ಹಿಂದೆ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿಕೊಳ್ಳುವ ಮೂಲಕ ಮತ್ತೆ ರೈತರ ಮನಸ್ಸು ಗೆಲ್ಲಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.