ಬೆಂಗಳೂರು: ನಗರ ಸಂಚಾರಿ ಪೊಲೀಸರ ಕರ್ತವ್ಯ ಪ್ರಜ್ಞೆ, ಸಮಯಪ್ರಜ್ಞೆ, ಮಾನವೀಯತೆ ಬಗ್ಗೆ ಹಲವು ಉದಾಹರಣೆಗಳೇ ಇವೆ. ಇದೀಗ ಮತ್ತೊಂದು ನಿದರ್ಶನ ಇಲ್ಲಿದೆ.
ಬೆಂಗಳೂರು ಪೊಲೀಸರು, ಮೆಕ್ಯಾನಿಕ್ ಜೊತೆ ಸೇರಿ ಬ್ರೇಕ್ ಡೌನ್ ಆಗಿದ್ದ ಬಸ್ ತೆರವುಗೊಳಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸಂಚಾರ ಪೊಲೀಸರೇ ಮೆಕ್ಯಾನಿಕ್ಗಳಾಗಿ ಕೈಯಲ್ಲಿ ಸ್ಪಾನರ್ ಹಿಡಿದು ಈ ಕಾರ್ಯ ಮಾಡಿದ್ದಾರೆ.
ಶನಿವಾರ ಸಂಜೆ ಏರ್ಪೋರ್ಟ್ ರಸ್ತೆಯ ಹೆಬ್ಬಾಳ ಪ್ಲೈಓವರ್ ಮೇಲೆ ಕೆಎಸ್ಆರ್ಟಿಸಿ ಬಸ್ ಪಂಕ್ಚರ್ ಆಗಿತ್ತು. ಪರಿಣಾಮ ಫ್ಲೈ ಓವರ್ ಮೇಲೆ ಬಸ್ ನಿಂತು ಟ್ರಾಫಿಕ್ ಜಾಮ್ ಆಗಿತ್ತು. ಮೊದಲೇ ವಿಮಾನ ನಿಲ್ದಾಣದ ರಸ್ತೆಯಲ್ಲಿ ಹೆಚ್ಚು ಟ್ರಾಫಿಕ್ ಇರೋದ್ರಿಂದ ಬಸ್ ನಿಂತ ನಂತರ ಟ್ರಾಫಿಕ್ ಹೆಚ್ಚಾಗತೊಡಗಿತ್ತು. ವಾಹನಗಳೆಲ್ಲವೂ ಸಾಲುಗಟ್ಟಿ ನಿಲ್ಲಲಾರಂಬಿಸಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಆಗಿತ್ತು.
ಘಟನೆ ಬಗ್ಗೆ ಮಾಹಿತಿ ಪಡೆದ ಆರ್ಟಿ ನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಆಗ ಅಲ್ಲಿ ಮೆಕ್ಯಾನಿಕ್ ಟೈರ್ ಬದಲಿಸುವ ಕೆಲಸ ಮಾಡುತ್ತಿದ್ದರು. ಆದಷ್ಟು ಬೇಗ ಸಂಚಾರಕ್ಕೆ ಅನುವು ಮಾಡಿಕೊಡಲು ಮೆಕ್ಯಾನಿಕ್ ಜೊತೆ ಸೇರಿದ ಪೊಲೀಸರು , ತಾವೂ ಮೆಕ್ಯಾನಿಕ್ಗಳಂತೆ ಸ್ಪ್ಯಾನರ್ ಹಿಡಿದು ಕೆಲಸ ಮಾಡಿದ್ದಾರೆ.
ಆರ್ಟಿ ನಗರ ಸಂಚಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಫಿರೋಜ್ ಖಾನ್, ಸಬ್ ಇನ್ಸ್‌ಪೆಕ್ಟರ್ ನಾಗಭೂಷಣ್, ಎಎಸ್ಐ ರಾಜಣ್ಣ, ಪೊಲೀಸ್ ಪೇದೆ ಮಧುಸೂಧನ್ ಸೇರಿ ಎಲ್ಲರೂ ಬೇಗ ಬಸ್ನ ಟೈರ್ ಬದಲಿಸಿ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.
ಸಂಚಾರಿ ಪೊಲೀಸರ ಈ ಕಾರ್ಯ ದಕ್ಷತೆಯನ್ನು ಸಂಚಾರ ಪೊಲೀಸ್ ಹೆಚ್ಚುವರಿ ಆಯುಕ್ತ ಆರ್. ಹಿತೇಂದ್ರ ಶ್ಲಾಘಿಸಿದ್ದಾರೆ. ಪೊಲೀಸರು ಮೆಕ್ಯಾನಿಕ್ ಗಳಂತೆ ಕೆಲಸ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.