ಜಿಎಸ್​ಟಿಗೆ ಒಂದು ವರ್ಷ: ದೇಶದ ಜನತೆಗೆ ಶುಭ ಹಾರೈಸಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಹಲವು ವಾದ-ವಿವಾದಗಳ ನಡುವೆಯೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಜಾರಿಯಾಗಿ ಒಂದು ವರ್ಷ ಕಳೆದಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಈ ವ್ಯವಸ್ಥೆಯ ವರ್ಷಾಚರಣೆಯ ವೇಳೆ ಪ್ರಧಾನಿ ಮೋದಿ ಇಂದು ಟ್ವಿಟರ್ ಮೂಲಕ ಶುಭಾಶಯ ಕೋರಿದ್ದಾರೆ.

ಜಿಎಸ್​ಟಿ ಒಂದು ವರ್ಷ ಪೂರೈಸಿರುವ ವಿಶೇಷ ಸನ್ನಿವೇಶದಲ್ಲಿ ನಾನು ಭಾರತದ ಜನತೆಗೆ ಶುಭ ಕೋರುತ್ತೇನೆ. ಇದು ಸಹಕಾರಯುತ ಒಕ್ಕೂಟ ವ್ಯವಸ್ಥೆಯ ಅತ್ಯುತ್ತಮ ಉದಾಹರಣೆ ಹಾಗೂ ಟೀಮ್​ ಇಂಡಿಯಾದ ಹುರುಪಾಗಿದೆ. ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಜಿಎಸ್​​ಟಿ ಸಕಾರಾತ್ಮಕ ಬದಲಾವಣೆ ತಂದಿದೆ ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.
ಜಿಎಸ್​ಟಿಯು ಭಾರತದ ಆರ್ಥಿಕತೆಯಲ್ಲಿ ಗ್ರೋತ್ (ಪ್ರಗತಿ), ಸಿಂಪ್ಲಿಸಿಟಿ (ಸರಳ), ಟ್ರಾನ್ಸ್​ಫರೆನ್ಸಿ(ಪಾರದರ್ಶಕತೆ) ತಂದಿದೆ. ಅಲ್ಲದೆ ಔಪಚಾರಿಕತೆ, ಉತ್ಪಾದಕತೆಗೆ ಬಲ ತುಂಬಿದೆ. ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಅನುಕೂಲ ಮಾಡಿಕೊಟ್ಟು, ವ್ಯಾಪಾರವನ್ನು ಸರಾಗವಾಗಿಸಿದೆ ಎಂದು ಟ್ವಿಟರ್​ನಲ್ಲಿ ಹೇಳಿಕೊಂಡಿದ್ದಾರೆ.
ಹಣಕಾಸು ಸಚಿವ ಪಿಯೂಶ್ ಗೋಯಲ್​ ಸಹ ಟ್ವೀಟ್​ ಮೂಲಕ ಶುಭಾಶಯ ಕೋರಿದ್ದು, ಜಿಎಸ್​ಟಿ ಭಾರತದಲ್ಲಿನ  ಪರಿವರ್ತಿತ ತೆರಿಗೆ ಸುಧಾರಣೆಯಾಗಿದೆ. ಒಂದೇ ರಾಷ್ಟ್ರ, ಒಂದೇ ತೆರಿಗೆ, ಒಂದೇ ಮಾರುಕಟ್ಟೆ ದೇಶದ ಪ್ರಗತಿಗೆ ಕಾರಣವಾಗಿದೆ. ಜನರಿಗೆ ಸರಳ ಹಾಗೂ ಆರ್ಥಿಕತೆಯಲ್ಲಿ ಪಾರದರ್ಶಕತೆ ತಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷ ಜೂನ್​ 30ರ ಮಧ್ಯರಾತ್ರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಜಿಎಸ್​ಟಿ ಜಾರಿಗೊಳಿಸಿದ್ದರು. ಒಂದೇ ರಾಷ್ಟ್ರ, ಒಂದೇ ತೆರಿಗೆ, ಒಂದೇ ಮಾರುಕಟ್ಟೆ ಗುರಿಯೊಂದಿಗೆ ಎಲ್ಲಾ ತೆರಿಗೆಯನ್ನು ಏಕ ಗವಾಕ್ಷಿ ಪರಿಕಲ್ಪನೆ ಮೂಲಕ ಜಾರಿಗೊಳಿಸುವ ಉದ್ದೇಶ ಇಲ್ಲಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ