ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಚೊಚ್ಚಲ ಬಜೆಟ್ ಅಧಿವೇಶನ: ಹಲವು ಪ್ರಥಮಗಳಿಗೆ ಕಾರಣ

 

ಬೆಂಗಳೂರು, ಜು.1-ನಾಳೆಯಿಂದ ಪ್ರಾರಂಭವಾಗಲಿರುವ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಚೊಚ್ಚಲ ಬಜೆಟ್ ಅಧಿವೇಶನ ಹಲವು ವೈಶಿಷ್ಟ್ಯ ಹಾಗೂ ಪ್ರಥಮಗಳಿಗೆ ಕಾರಣವಾಗಿದೆ.
ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಚೊಚ್ಚಲ ಬಜೆಟ್‍ನ್ನು ಇದೇ ಅಧಿವೇಶನದಲ್ಲಿ ಮಂಡಿಸುತ್ತಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದರೂ ಹಣಕಾಸು ಖಾತೆಯನ್ನು ಹೊಂದಿರಲಿಲ್ಲ. ಬಜೆಟ್ ಕೂಡ ಕುಮಾರಸ್ವಾಮಿ ಮಂಡಿಸಿರಲಿಲ್ಲ. ಪ್ರಥಮ ಬಾರಿ ಬಜೆಟ್ ಮಂಡಿಸುತ್ತಿರುವುದು ಈ ಅಧಿವೇಶನದ ವಿಶೇಷವಾಗಿದೆ.

ಸಮ್ಮಿಶ್ರ ಸರ್ಕಾರದಲ್ಲಿ 100ಕ್ಕೂ ಹೆಚ್ಚು ಶಾಸಕರು ಹೊಸದಾಗಿ ಆಯ್ಕೆಯಾದವರಿದ್ದರೆ, ಉಭಯ ಸದನಗಳಲ್ಲಿ ಅಪ್ಪ-ಮಗಳು, ಅಣ್ಣ-ತಮ್ಮಂದಿರು ಇದ್ದರೆ, ಆಯ್ಕೆಯಾಗಿರುವ 25 ಸಚಿವರಲ್ಲಿ ಅರ್ಧಕ್ಕೂ ಹೆಚ್ಚು ಸಚಿವರು ಹೊಸಬರಾಗಿರುವುದು ವಿಶೇಷವಾಗಿದೆ.
ಡಾ.ಜಿ.ಪರಮೇಶ್ವರ್ ಅವರು ಪ್ರಥಮ ಬಾರಿಗೆ ಉಪಮುಖ್ಯಮಂತ್ರಿಯಾಗಿದ್ದರೆ, ಬಿಎಸ್‍ಪಿಯಿಂದ ಪ್ರಥಮ ಬಾರಿ ಶಾಸಕರಾಗಿರುವ ಎನ್.ಮಹೇಶ್ ಅವರು ಸಚಿವರಾಗಿದ್ದಾರೆ. ಅದೇ ರೀತಿ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಸಾ.ರಾ.ಮಹೇಶ್, ಎಸ್.ಆರ್.ಶ್ರೀನಿವಾಸ್, ವೆಂಕಟರಾವ್ ನಾಡಗೌಡ, ಎನ್.ಎಚ್.ಶಿವಶಂಕರರೆಡ್ಡಿ, ಆರ್.ಶಂಕರ್, ಡಾ.ಜಯಮಾಲಾ, ಶಿವಾನಂದ ಪಾಟೀಲ್, ಪುಟ್ಟರಂಗಶೆಟ್ಟಿ ಅವರು ಪ್ರಥಮ ಬಾರಿಗೆ ಸಚಿವರಾಗಿರುವುದು ವಿಶೇಷವಾಗಿದೆ.

ಮಾಜಿ ಉಪಮೇಯರ್ ಆರ್.ಶಂಕರ್ ಅವರು ರಾಣೆಬೆನ್ನೂರು ಕ್ಷೇತ್ರದಲ್ಲಿ ಕೆಪಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಈಗ ಸಚಿವರಾಗಿ ಸದನದಲ್ಲಿ ಭಾಗವಹಿಸುತ್ತಿದ್ದಾರೆ.
ವಿಧಾನಪರಿಷತ್ ಸದಸ್ಯರಾಗಿರುವ ಜಯಮಾಲಾ ಅವರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾಗಿರುವುದಷ್ಟೇ ಅಲ್ಲದೆ, ವಿಧಾನಪರಿಷತ್ ಸಭಾನಾಯಕರಾಗಿರುವುದು ವಿಶೇಷ. ಸಾಕಷ್ಟು ಹಿರಿಯ ಸದಸ್ಯರಿದ್ದು, ಜಯಮಾಲಾ ಅವರಿಗೆ ಈ ಸ್ಥಾನ ಒಲಿದು ಬಂದಿರುವುದು ಅದೃಷ್ಟ. ಪ್ರಥಮ ಬಾರಿ ಸಚಿವರಾಗಿರುವ ಅವರು ಪ್ರಥಮ ಬಾರಿಯೇ ಸಭಾನಾಯಕರಾಗುತ್ತಿರುವುದು ವಿಶೇಷ.

ಚಿಕ್ಕಮಗಳೂರಿನ ಸಖರಾಯಪಟ್ಟಣದ ಧರ್ಮೇಗೌಡ, ಭೋಜೇಗೌಡ ಸಹೋದರರು ಏಕಕಾಲದಲ್ಲಿ ವಿಧಾನಪರಿಷತ್ ಪ್ರವೇಶಿಸುತ್ತಿರುವುದು ವಿಶೇಷ.
ಭೋಜೇಗೌಡ ಅವರು ಪದವೀಧರ ಕ್ಷೇತ್ರದಿಂದ ಆಯ್ಕೆಯಾದರೆ, ಧರ್ಮೇಗೌಡರು ವಿಧಾನಸಭೆಯಿಂದ ಆಯ್ಕೆಯಾಗಿ ವಿಧಾನಪರಿಷತ್‍ಗೆ ಆಯ್ಕೆಯಾದರು.
ಏಳು ಬಾರಿ ವಿಧಾನಪರಿಷತ್‍ನ ಸದಸ್ಯರಾದ ಬಸವರಾಜ ಹೊರಟ್ಟಿ ಅವರು ಹಂಗಾಮಿ ಸ್ಪೀಕರ್ ನೇಮಕಗೊಂಡಿದ್ದಾರೆ. ಪ್ರಥಮ ಬಾರಿಗೆ ಅಧಿವೇಶನ ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ನಾಳೆಯಿಂದ ಪ್ರಾರಂಭವಾಗಲಿರುವ ಬಜೆಟ್ ಅಧಿವೇಶನದ ವಿಧಾನಪರಿಷತ್ ಕಲಾಪ ಹೊರಟ್ಟಿ ಅವರ ನೇತೃತ್ವದಲ್ಲಿ ನಡೆಯಲಿರುವುದು ವಿಶೇಷ.

ಹಿರಿಯ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರೂ ಕೂಡ ಪರಿಷತ್ ವಿಪಕ್ಷ ನಾಯಕರಾಗಿ ಸದನ ಎದುರಿಸುತ್ತಿರುವುದು ಪ್ರಥಮ ಬಾರಿ.
ಇತ್ತ ವಿಧಾನಸಭೆಯಲ್ಲಿ ಪ್ರಬಲ ವಿರೋಧ ಪಕ್ಷವಿರುವುದು ಕೂಡ ಇದೇ ಪ್ರಥಮ ಬಾರಿಗೆ. ಇಷ್ಟು ದೊಡ್ಡ ಸಂಖ್ಯೆಯ ವಿರೋಧ ಪಕ್ಷ ಇದುವರೆಗೂ ಇದ್ದಂತಿರಲಿಲ್ಲ. ಪ್ರಬಲ ವಿರೋಧ ಪಕ್ಷವಾದ ಬಿಜೆಪಿ 104 ಸದಸ್ಯ ಸಂಖ್ಯೆಯನ್ನು ಹೊಂದಿದೆ.
ಒಟ್ಟಾರೆ ನಾಳೆಯಿಂದ ಪ್ರಾರಂಭವಾಗಲಿರುವ ಬಜೆಟ್ ಅಧಿವೇಶನ ಹಲವು ವೈಶಿಷ್ಟ್ಯಗಳಿಗೆ ಕಾರಣವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ