ನಗರದ ಕೆರೆಗಳ ಪುನರುಜ್ಜೀವನಕ್ಕೆ ಕೇಂದ್ರ ಸಚಿವ ಅನಂತ್‍ಕುಮಾರ್ ಕರೆ

 

ಬೆಂಗಳೂರು, ಜು.1-ನಗರದ ಬಹುತೇಕ ಕೆರೆಗಳು ಗಬ್ಬು ನಾರುತ್ತಿದ್ದು, ಇವುಗಳ ಪುನರುಜ್ಜೀವನಕ್ಕೆ ಎಲ್ಲರೂ ಪಣತೊಡಬೇಕಿದೆ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಕರೆ ನೀಡಿದರು.

ಬಸವನಗುಡಿಯ ಕೆಂಪಾಂಬುಧಿ ಕೆರೆಯಲ್ಲಿ ಹಸಿರು ಭಾನುವಾರ ಹಾಗೂ ಮೂಲಿಕಾವನ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಕೆಂಪಾಂಬುಧಿ ಕೆರೆಯನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತಿತ್ತು. ನಾಡಪ್ರಭು ಕೆಂಪೇಗೌಡರು ಕಟ್ಟಿಸಿದ ಈ ಕೆರೆ ಅವಸಾನದತ್ತ ಸಾಗಿತ್ತು. ಆಗ ನಾವು ಬೆಂಗಳೂರಿನ ಕೆರೆಗಳನ್ನು ರಕ್ಷಿಸುವ ಸಂಕಲ್ಪ ಮಾಡಿದೆವು. ಇದೀಗ ಕೆರೆಗಳ ಪುನರುಜ್ಜೀವನಕ್ಕೆ ವೇಗ ಸಿಕ್ಕಿದೆ ಎಂದು ಹೇಳಿದರು.
ಕೆಂಪಾಂಬುಧಿ ಕೆರೆಯನ್ನು ಇನ್ನೂ ವಿಸ್ತಾರ ಮಾಡಿ ಕಾಲು ದಾರಿವರೆಗೂ ನೀರು ಇರುವಂತೆ ನೋಡಿಕೊಳ್ಳಬೇಕು. ಒತ್ತುವರಿಯಾಗಿರುವುದನ್ನು ತೆರವುಗೊಳಿಸಬೇಕು ಎಂದು ತಿಳಿಸಿದರು.

ಕೆರೆಗಳನ್ನು ಕಬಳಿಸುವುದನ್ನು ತಡೆದು ವಿಸ್ತೀರ್ಣ ಮಾಡುವ ಕೆಲಸ ಆಗಬೇಕು. ಇದಕ್ಕೆ ಜನಪ್ರತಿನಿಧಿಗಳೂ ಸೇರಿದಂತೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಬೆಂಗಳೂರಿನ ಕೆರೆಗಳ ಬಗ್ಗೆ ಸ್ಥಳೀಯ ಶಾಸಕರು, ಬಿಬಿಎಂಪಿ ಹಾಗೂ ಸಾರ್ವಜನಿಕ ಮುಖಂಡರು ಸಂಶೋಧನೆ ಮಾಡಬೇಕಿದೆ. ಈ ಬಗ್ಗೆ ಗಮನಹರಿಸಬೇಕೆಂದು ಸ್ಥಳದಲ್ಲಿದ್ದ ಶಾಸಕರಾದ ಉದಯ ಗರುಡಾಚಾರ್, ರವಿಸುಬ್ರಹ್ಮಣ್ಯ ಮತ್ತಿತರರಲ್ಲಿ ಮನವಿ ಮಾಡಿದರು.
ಬೆಳ್ಳಂದೂರು ಕೆರೆ ಬೆಂಕಿ ಹೊಗೆಯಿಂದ ತುಂಬಿ ಮಾರಕವಾಗುತ್ತಿದೆ. ನಗರದ ಇನ್ನೂ ಅನೇಕ ಕೆರೆಗಳು ಗಬ್ಬುನಾರುತ್ತಿವೆ ಎಂದು ವಿಷಾದಿಸಿದ ಅನಂತ್‍ಕುಮಾರ್, ಯಾವುದೇ ಕಾರಣಕ್ಕೂ ಕೆರೆ ಅಭಿವೃದ್ಧಿ ಗುತ್ತಿಗೆದಾರ ಕೈಗೆ ಸಿಗಬಾರದು. ಜವಾಬ್ದಾರಿಯುತ ಜನರೇ ಇದನ್ನು ಕೈಗೆತ್ತಿಕೊಳ್ಳಬೇಕು ಎಂದು ಹೇಳಿದರು.

ಜೀವಂತ ಕೆರೆಗಳು ನಮಗೆ ಬೇಕು. ಮಳೆ ನೀರಾಗಲೀ, ಯಾವುದೇ ನೀರಾಗಲಿ ಅದು ಜೊಂಡು, ಜಲಸಸ್ಯದ ಮೂಲಕ ಶುದ್ಧೀಕರಣಗೊಂಡು ಆಮ್ಲಜನಕ ಸ್ವೀಕರಿಸಿ ನಂತರ ಕೆರೆಗೆ ಹರಿದು ಹೋಗಬೇಕು. ಆದರೆ ಆಧುನಿಕ ಕೆರೆ ಅಭಿವೃದ್ಧಿಯಲ್ಲಿ ಈ ರೀತಿ ಆಗುತ್ತಿಲ್ಲ ಎಂದರು.
ಒಂದು ಕೆರೆ ಎಂದರೆ ಜೌಗುಪ್ರದೇಶ, ಜೊಂಡು, ಜಲಸಸ್ಯ, ಮೀನು ಇತ್ಯಾದಿ ಜಲಚರಗಳು, ಪಕ್ಷಿಗಳು, ಸುಂದರ ಪರಿಸರ ವಲಯ ಇರಬೇಕು. ಅಂತಹ ವಾತಾವರಣವಿರುವ ಕೆರೆಗಳು ಬೆಂಗಳೂರಿಗೆ ಅತ್ಯವಶ್ಯಕವಾಗಿದೆ. ವಾರದಲ್ಲಿ ಒಂದು ದಿನವಾದರೂ ಕೆರೆ, ವನ ಉಳಿಸುವ ಕೆಲಸ ಮಾಡಿದರೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಅನಂತ್‍ಕುಮಾರ್ ಸಾರ್ವಜನಿಕರಿಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಕಟ್ಟೆಬಳಗದ ಸತ್ಯ, ನಟಿ ಶೃತಿ, ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತ್‍ಕುಮಾರ್, ಪರಿಸರವಾದಿ ಯಲ್ಲಪ್ಪರೆಡ್ಡಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸದಾಶಿವ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ