ನವದೆಹಲಿ,ಜು.1- ಮುಂದಿನ 2025ರ ವೇಳೆಗೆ ದೇಶದ ಜಿಡಿಪಿ, ಅಮೆರಿಕದ ಐದು ಟ್ರಿಲಿಯನ್ ಡಾಲರ್ನ್ನು ಮೀರಿಸಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭವಿಷ್ಯ ನುಡಿದಿದ್ದಾರೆ.
ಚಾಟರ್ಡ್ ಅಕೌಂಟ್ಗಳ ಸಂಘದ ಪ್ಲಾಟಿನಮ್ ಜೂಬಿಲಿ ಉತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದ್ದು , ಮುಂದಿನ 10 ವರ್ಷದ ವೇಳೆಗೆ ನಮ್ಮ ರಾಷ್ಟ್ರದ ಜಿಡಿಪಿ 5 ಟ್ರಿಲಿಯನ್ ಅಮೆರಿಕ ಡಾಲರ್ನಷ್ಟು ವೃದ್ಧಿಯಾಗಲಿದೆ ಎಂದು ಹೇಳಿದರು.
ದೇಶದಲ್ಲಿ ಸುಧಾರಿತ ತೆರಿಗೆ ಪದ್ದತಿ ಜಾರಿಗೆ ಬಂದಿರುವುದರಿಂದ ಸರ್ಕಾರಕ್ಕೆ ತೆರಿಗೆ ಹಣ ಹರಿದುಬರುತ್ತಿದೆ. ಹೀಗಾಗಿ ಚಾಟರ್ಡ್ ಅಕೌಂಟೆಂಟ್ಗಳು ಸಮಾಜದ ವಾಚ್ ಡಾಗ್ಗಳಂತೆ ಕರ್ತವ್ಯ ನಿರ್ವಹಿಸಬೇಕೆಂದು ಕರೆ ನೀಡಿದರು. ದೇಶದಲ್ಲಿ ಸುಧಾರಿತ ತೆರಿಗೆ ಪದ್ಧತಿ ಯಶಸ್ವಿಗೊಳಿಸುವ ಕಾರ್ಯದಲ್ಲಿ ಚಾಟರ್ಡ್ ಅಕೌಂಟೆಂಟ್ಗಳ ಪಾತ್ರ ಮಹತ್ತರವಾದದ್ದು ಎಂದು ಕೋವಿಂದ್ ಹೇಳಿದರು.
ಕೇಂದ್ರ ಸಚಿವ ಪಿ.ಪಿ.ಚೌಧರಿ ಮಾತನಾಡಿ, ಕಪ್ಪು ಹಣದ ವಿರುದ್ಧದ ಹೋರಾಟವನ್ನು ಕೇಂದ್ರ ಸರ್ಕಾರ ಮುಂದುವರೆಸಿದ್ದು ,ಈಗಾಗಲೇ ಶಂಕಿತ 2.25 ಲಕ್ಷ ಕಂಪನಿಗಳನ್ನು ಗುರುತಿಸಲಾಗಿದೆ. ಶೀಘ್ರದಲ್ಲೇ ಕಾಳಧನಿಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
2022ಕ್ಕೆ ವಲ್ರ್ಡ್ ಕಾಂಗ್ರೆಸ್ ಅಕೌಂಟೆಂಟ್ ದಿನಾಚರಣೆಯನ್ನು ಭಾರತದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಐಸಿಎಐ ಅಧ್ಯಕ್ಷ ನವೀನ್ ಎನ್.ಡಿ.ಗುಪ್ತ ತಿಳಿಸಿದರು.