
ಜಮ್ಮು , ಜು.1- ಪ್ರತಿಕೂಲ ವಾತಾವರಣದಿಂದ ನಿರ್ಬಂಧ ವಿಧಿಸಲಾಗಿದ್ದ ಅಮರನಾಥ ಯಾತ್ರೆ ಇಂದಿನಿಂದ ಪುನರಾರಂಭಗೊಂಡಿದೆ. ಯಾತ್ರೆ ಆರಂಭಗೊಂಡ ಹಿನ್ನೆಲೆಯಲ್ಲಿ ಕಾಶ್ಮೀರದ ಶಿಬಿರಗಳಲ್ಲಿ ಬೀಡು ಬಿಟ್ಟಿದ್ದ 6,877ಕ್ಕೂ ಹೆಚ್ಚು ಭಕ್ತಾದಿಗಳು ಅಮರನಾಥ ದರ್ಶನಕ್ಕೆ ಯಾತ್ರೆ ಆರಂಭಿಸಿದರು.
1429 ಮಹಿಳೆಯರು ಹಾಗೂ 250ಕ್ಕೂ ಹೆಚ್ಚು ಸಾಧು ಸಂತರು ಭಾಗವತಿ ನಗರದ ಶಿಬಿರದಿಂದ ಹಾಗೂ ಬಲ್ತಾಲ್ ಶಿಬಿರದಲ್ಲಿ ಬೀಡು ಬಿಟ್ಟಿದ್ದ ಸಾವಿರಾರು ಭಕ್ತಾದಿಗಳು ಇಂದು ಮುಂಜಾನೆ ಬಿಗಿ ಭದ್ರತೆಯಲ್ಲಿ ಯಾತ್ರೆ ಕೈಗೊಂಡರು. ಜಮ್ಮು ಕಣಿವೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಪ್ರವಾಹ ಭೀತಿ ಎದುರಾಗಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ನಿಷೇಧಗೊಳಿಸಲಾಗಿತ್ತು.
ಇಂದು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಗೆ ಸ್ಥಳೀಯ ಆಡಳಿತ ಅನುಮತಿ ನೀಡಿತ್ತು. ಇತಿಹಾಸ ಪ್ರಸಿದ್ಧ ಅಮರನಾಥ ಯಾತ್ರೆಗೆ ಪ್ರತಿ ವರ್ಷ ದೇಶ ವಿದೇಶಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಮಂಜಿನಲ್ಲಿ ಉದ್ಭವಿಸುವ ಶಿವನ ದರ್ಶನ ಪಡೆದು ಪುನೀತರಾಗುವ ಈ ಯಾತ್ರೆ 60 ದಿನಗಳ ಕಾಲ ನಡೆಯಲಿದ್ದು , ಆ.26ರ ರಕ್ಷಾ ಬಂಧನ್ ದಿನಾಚರಣೆ ನಂತರ ಯಾತ್ರೆ ಸ್ಥಗಿತಗೊಳ್ಳಲಿದೆ.