ಬೆಂಗಳೂರು,ಜೂ.30-ಸರ್ಕಾರದ ಮಟ್ಟದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಸವಲತ್ತುಗಳನ್ನು ನೀಡಿ ಭೋವಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಸಚಿವ ವೆಂಕಟರಮಣಪ್ಪ ಭರವಸೆ ನೀಡಿದರು.
ನಗರದಲ್ಲಿ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ವತಿಯಿಂದ ಸಮುದಾಯದ ಸಚಿವರು, ಶಾಸಕರು ಹಾಗೂ ಗಣ್ಯರಿಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮೊದಲು ನಮ್ಮ ಸಮಾಜದವರು ಒಗ್ಗಟ್ಟಾಗಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಬರೀ ಕಲ್ಲು ಹೊಡೆದು ಅಣೆಕಟ್ಟೆ ಕಟ್ಟುತ್ತ ಕುಳಿತರೆ ಪ್ರಯೋಜನವಾಗಲಾರದು. ಉತ್ತಮ ವ್ಯಾಸಂಗ ಪಡೆದು ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಸಲಹೆ ನೀಡಿದರು.
ಮೊದಲು ಕೀಳರಿಮೆ ಬಿಡಿ. ಬೇರೆ ಸಮುದಾಯವರನ್ನು ನೋಡಿ ಕಲಿಯಿರಿ. ಇತರೆ ಸಮುದಾಯದವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಾರೆ. ಹಾಗೆಯೇ ನೀವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಮುಂದೆ ಬರಲು ಯತ್ನಿಸಿ ಎಂದು ಕರೆ ನೀಡಿದರು.
ಭೋವಿ ನಿಗಮ ಮಂಡಳಿಗೆ ಹೆಚ್ಚಿನ ಆರ್ಥಿಕ ನೆರವು ಕೇಳಿದ್ದೀರಿ. ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರವೇ ಆರ್ಥಿಕ ನೆರವು ನೀಡಲು ಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಭೋವಿ ಅಭಿವೃದ್ದಿ ನಿಗಮ ಸ್ಥಾಪಿಸಿದರು. ಈಗಿನ ಸಮ್ಮಿಶ್ರ ಸರ್ಕಾರ ಈ ನಿಗಮಕ್ಕೆ ಒಂದು ಸಾವಿರ ಕೋಟಿ ಅನುದಾನ ಕೊಡಬೇಕು ಎಂದು ಮನವಿ ಮಾಡಿದರು.
ಭೋವಿ ಸಮಾಜದ ನಾವೆಲ್ಲ ಒಂದಾಗಿರಬೇಕು. ಮೊದಲು ಒಬ್ಬರಿಗೊಬ್ಬರು ಕಾಲೆಳೆಯುವ ಕೆಲಸ ನಿಲ್ಲಿಸಬೇಕು. ಸಮಾಜದ ಒಳಿತಿಗಾಗಿ ಎಲ್ಲರೂ ಶ್ರಮಿಸಬೇಕು. ನಾನು ಸಚಿವನಾಗಿದ್ದಾಗ ನನ್ನ ಇತಿಮಿತಿಯಲ್ಲಿ ಸಮಾಜದ ಅಭಿವೃದ್ದಿಗೆ ಕೆಲಸ ಮಾಡಿದ್ದೆ. ಈಗ ಸಚಿವ ವೆಂಕಟರಮಣಪ್ಪನವರು ಮುಂದುವರೆಸಬೇಕೆಂದು ಕೋರಿದರು.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೇರಿದಂತೆ ಭೋವಿ ಸಮಾಜದ ಜನಪ್ರತಿನಿಧಿಗಳು ಹಾಗೂ ಮುಖಂಡರನ್ನು ಸನ್ಮಾನಿಸಲಾಯಿತು.