ಬೆಂಗಳೂರು, ಜೂ.30-ಬಿಬಿಎಂಪಿಯನ್ನು ಯಾವುದೇ ಕಾರಣಕ್ಕೂ ವಿಭಜನೆ ಮಾಡಬಾರದು, ಸರ್ಕಾರ ಆ ಕ್ರಮಕ್ಕೆ ಮುಂದಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದಿಲ್ಲಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಮಾಡುವುದು ನಾಡಪ್ರಭು ಕೆಂಪೇಗೌಡರ ಉದ್ದೇಶಕ್ಕೆ ಭಂಗ ತರುತ್ತದೆ. ಹಾಲಿ ಇರುವ 198 ವಾರ್ಡ್‍ಗಳನ್ನು ಮುಂದುವರೆಸಿ ಮೇಯರ್ ಅವರನ್ನು 5 ವರ್ಷ ಅವಧಿಗೆ ಜನರಿಂದ ನೇರ ಆಯ್ಕೆ ಮಾಡುವ ಕ್ರಮವನ್ನು ಜಾರಿಗೊಳಿಸಬೇಕು ಎಂದು ಅವರು ಹೇಳಿದರು.
ಐದು ಪಾಲಿಕೆ ಮಾಡುವುದು, 400 ವಾರ್ಡ್‍ಗಳನ್ನು ವಿಸ್ತರಿಸುವ ಕ್ರಮ ಅವೈಜ್ಞಾನಿಕವಾಗಿದೆ. ಬೆಂಗಳೂರು ಮಹಾನಗರ ವಿಶ್ವಮಾನ್ಯವಾಗಿದೆ. ವಿಶ್ವದ ನಾನಾ ರಾಷ್ಟ್ರಗಳ ಗಣ್ಯರು ಬೆಂಗಳೂರಿಗೆ ಆಗಮಿಸುತ್ತಾರೆ. ಐದು ಪಾಲಿಕೆಗಳಾದರೆ, ಐದು ಮಂದಿ ಮೇಯರ್‍ಗಳಾಗಬೇಕು. ವಿದೇಶಿ ಗಣ್ಯರನ್ನು ಯಾರು ಆಹ್ವಾನಿಸಬೇಕು ಎಂದು ವಾಟಾಳ್ ಪ್ರಶ್ನಿಸಿದರು.
ಎಂಟು ನಗರಸಭೆಗಳನ್ನು ಈಗಾಗಲೇ ಬೆಂಗಳೂರಿಗೆ ಸೇರಿಸಿ ಬೆಂಗಳೂರು ಮಹಾನಗರ ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆಯನ್ನಾಗಿ ಪರಿವರ್ತಿಸಲಾಗಿತ್ತು. ಮತ್ತೆ ಅದನ್ನು ವಿಂಗಡಿಸಿ 400 ವಾರ್ಡ್‍ಗಳನ್ನಾಗಿ ಮಾಡಿ ಗ್ರೇಟರ್ ಬೆಂಗಳೂರು ಮಾಡುವುದು ಎಷ್ಟು ಸಮಂಜಸ?ಈ ಕ್ರಮವನ್ನು ನಾವು ವಿರೋಧಿಸುತ್ತೇವೆ. ಯಾವುದೇ ಕಾರಣಕ್ಕೂ ಬಿಬಿಎಂಪಿಯನ್ನು ವಿಭಜಿಸಬಾರದು. ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಮತ್ತು ಅವರ ಉದ್ದೇಶಕ್ಕೆ ಧಕ್ಕೆ ತರಬಾರದು ಎಂದು ಆಗ್ರಹಿಸಿದರು.
ಬೆಂಗಳೂರನ್ನು ವಿಭಜಿಸಬೇಕೆಂದು ಸಮಿತಿ ಕೊಟ್ಟಿರುವ ವರದಿ ವಿರೋಧಿಸಿ ನಾಳೆ (ಜು.1) ಬೆಳಿಗ್ಗೆ ಬಿಬಿಎಂಪಿ ಮುಂಭಾಗವಿರುವ ಕೆಂಪೇಗೌಡ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ವಾಟಾಳ್ ತಿಳಿಸಿದರು.
ನೀರು ನಿರ್ವಹಣಾ ಪ್ರಾಧಿಕಾರಅಪಾಯ:
ಕೇಂದ್ರ ಸರ್ಕಾರ ರಾಜಕೀಯ ಕಾರಣಕ್ಕಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚಿಸಿದೆ. ರಾಜ್ಯ ಸರ್ಕಾರ ಇದಕ್ಕೆ ಮಣಿಯಬಾರದು. ನಮ್ಮ ಜಲಾಶಯಗಳನ್ನೆಲ್ಲ ಕೇಂದ್ರದ ಕೈಗೆ ಕೊಟ್ಟು ನಾವು ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಭವಿಷ್ಯದ ದಿನಗಳಲ್ಲಿ ನಾವು ಅಪಾಯ ಎದುರಿಸಬೇಕಾಗಿದೆ ಎಂದು ವಾಟಾಳ್ ಆತಂಕ ವ್ಯಕ್ತಪಡಿಸಿದರು.
ಸಂಸತ್‍ನಲ್ಲಿ ಚರ್ಚೆಯಾಗದೆ ಕಾವೇರಿ ಪ್ರಾಧಿಕಾರ ರಚನೆ ಆಗಬಾರದು. ಒಂದು ವೇಳೆ ಇದರಿಂದ ನಮಗೆ ಅನ್ಯಾಯವಾದರೆ ನಾವು ಜೈಲ್ ಭರೋ ಚಳವಳಿ ನಡೆಸುತ್ತೇವೆ ಎಂದು ಹೇಳಿದರು.