ಬೆಂಗಳೂರು, ಜೂ.30-ಕಳೆದ ಒಂದು ವಾರದಿಂದ ದುರ್ಬಲಗೊಂಡಿದ್ದ ಮುಂಗಾರು ಮಳೆ ಇನ್ನೆರಡು ದಿನದಲ್ಲಿ ಚೇತರಿಕೆ ಕಾಣುವ ಲಕ್ಷಣಗಳಿವೆ.
ಜುಲೈ 2ರ ನಂತರ ರಾಜ್ಯದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎ.ಶ್ರೀನಿವಾಸ ರೆಡ್ಡಿ ತಿಳಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಜೂನ್ ತಿಂಗಳ ಮೊದಲ ವಾರದಲ್ಲಿ ಬಿದ್ದಂತಹ ಭಾರೀ ಮಳೆ, ಕಳೆದ ವಾರದಲ್ಲಿ ಬಿದ್ದಿಲ್ಲ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಇಳಿಮುಖವಾಗಿದೆ. ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಹಾಗೂ ಮೇಲ್ಮೈ ಗಾಳಿ ಬೀಸುತ್ತಿದ್ದರೂ ಉತ್ತಮ ಮಳೆಯಾಗುತ್ತಿಲ್ಲ. ಇನ್ನೊಂದು ವಾರದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಗಳು ಕಂಡು ಬರುತ್ತಿಲ್ಲ. ಆದರೆ ರಾಜ್ಯದ ಹಲವೆಡೆ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗಲಿದೆ.
ಭಾರೀ ಮಳೆಯಾಗುತ್ತಿದ್ದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮೂರು ದಿನಗಳ ನಂತರ ಮತ್ತೆ ಮಳೆ ಚೇತರಿಕೆ ಕಾಣಲಿದ್ದು, ಹೆಚ್ಚಿನ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹೇಳಿದರು.
ರಾಜ್ಯದಲ್ಲಿ ಇದುವರೆಗೂ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲೂ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಜೂನ್ ತಿಂಗಳ ಸರಾಸರಿ ವಾಡಿಕೆ ಮಳೆ ಪ್ರಮಾಣ 194.09 ಮಿಲಿ ಮೀಟರ್ ಆಗಿದ್ದು, ಇದುವರೆಗೂ 334.01 ಮಿಲಿ ಮೀಟರ್‍ನಷ್ಟು ಮಳೆಯಾಗಿದ್ದು, ಶೇ.20.1 ರಷ್ಟು ಹೆಚ್ಚು ಮಳೆಯಾಗಿದೆ. ಆದರೆ ರಾಜ್ಯದ ಉತ್ತರ ಒಳನಾಡಿನಲ್ಲಿ ವಾಡಿಕೆಯ 101.1 ಮಿಲಿಮೀಟರ್ ಮಳೆಯಾಗಬೇಕಿತ್ತು. 95.8 ಮಿಲಿಮೀಟರ್‍ನಷ್ಟು ಮಾತ್ರ ಮಳೆಯಾಗಿದ್ದು, ಶೇ.5.2ರಷ್ಟು ಕೊರತೆ ಉಂಟಾಗಿದೆ.
ದಕ್ಷಿಣ ಒಳನಾಡಿನಲ್ಲೂ ಶೇ.24.4ರಷ್ಟು, ಮಲೆನಾಡಿನಲ್ಲಿ ಶೇ.48.1ರಷ್ಟು ಹಾಗೂ ಕರಾವಳಿಯಲ್ಲಿ ಶೇ.16.6ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾದ ವರದಿಯಾಗಿದೆ.