ವಿಜಯ್ ಮಲ್ಯ ಒಡೆತನದ ಐಷಾರಾಮಿ ವಿಮಾನ ಹರಾಜು

 

ಬೆಂಗಳೂರು,ಜೂ.30- ಭಾರತದ ವಿವಿಧ ಬ್ಯಾಂಕ್‍ಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ಲಂಡನ್‍ನಲ್ಲಿ ನೆಲೆಸಿರುವ ಹೆಂಡದ ದೊರೆ ವಿಜಯ್ ಮಲ್ಯ ಒಡೆತನದ ಐಷಾರಾಮಿ ವಿಮಾನವನ್ನು ಹರಾಜು ಮಾಡಲಾಗಿದೆ.
ಮುಂಬೈ ನ್ಯಾಯಾಲಯದ ನಿರ್ದೇಶನದಂತೆ ವಿಜಯ್ ಮಲ್ಯ ಬಳಸುತ್ತಿದ್ದ ಎ319-133ಸಿ-ವಿಟಿ-ವಿಜೆಎಂ ಎಂಎಸ್‍ಎನ್2650 ವಿಮಾನವನ್ನು 34.8 ಕೋಟಿ(5.5 ಮಿಲಿಯನ್ ಡಾಲರ್) ಹರಾಜು ಹಾಕಲಾಗಿದೆ.

ಮುಂಬೈ ಹೈಕೋರ್ಟ್ ನಿರ್ದೇಶನದಂತೆ ಈ ವಿಮಾನವನ್ನು ಕರ್ನಾಟಕ ಹೈಕೋರ್ಟ್‍ನ ನ್ಯಾಯಾಧೀಶರ ಸೂಚನೆ ಮೇರೆಗೆ ಹರಾಜು ಹಾಕಲಾಗಿದ್ದು, ಅನಿವಾಸಿ ಭಾರತೀಯರೊಬ್ಬರು ಖರೀದಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
25 ಮಂದಿ ಪ್ರಯಾಣಿಕರು, ಇಬ್ಬರು ಪೈಲೆಟ್‍ಗಳು ಹಾಗೂ ವಿಮಾನ ಸಿಬ್ಬಂದಿ ಪ್ರಯಾಣಿಸಬಹುದಾಗಿದ್ದ ವಿಮಾನದಲ್ಲಿ ಎಲ್ಲ ರೀತಿಯ ಅತ್ಯಾಧುನಿಕ ಸೌಲಭ್ಯಗಳಿದ್ದವು. ಬೆಡ್‍ರೂಮ್, ಶೌಚಾಲಯ, ಬಾರ್, ಪತ್ರಿಕಾಗೋಷ್ಟಿ ನಡೆಸಲು ಪ್ರತ್ಯೇಕ ಕೊಠಡಿ, ಹವಾನಿಯಂತ್ರಿತ ಕೊಠಡಿಗಳು ಸೇರಿದಂತೆ ಐಷಾರಾಮಿ ಸವಲತ್ತುಗಳಿದ್ದವು.

ವಿವಿಧ ಬ್ಯಾಂಕ್‍ಗಳಲ್ಲಿ ಸಾಲ ಪಡೆದಿದ್ದ ವಿಜಯ್ ಮಲ್ಯ ಈ ವಿಮಾನವನ್ನು ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದರು.
ಯಾವುದೇ ಒಂದು ವಿಮಾನವನ್ನು ನಿಲ್ದಾಣದಲ್ಲಿ ನಿಲ್ಲಿಸಿದಾಗ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನಿಯಮದಂತೆ ವಿಮಾನ ನಿಲ್ದಾಣಕ್ಕೆ ಸೇವಾ ಶುಲ್ಕ(ಸರ್ವೀಸ್ ಟ್ಯಾಕ್ಸ್) ಕಟ್ಟಬೇಕು.
2013ರಿಂದ ವಿಜಯ್ ಮಲ್ಯ ವಿಮಾನ ನಿಲ್ದಾಣಕ್ಕೆ ಯಾವುದೇ ರೀತಿಯ ಶುಲ್ಕವನ್ನು ಕಟ್ಟಿರಲಿಲ್ಲ ಎನ್ನಲಾಗಿದೆ. ಭಾರತದಿಂದ ವಿದೇಶದಲ್ಲಿ ಸುಸ್ತಿದಾರನಾಗಿ ತಲೆಮರೆಸಿಕೊಳ್ಳುತ್ತಿದ್ದಂತೆ ಸೇವಾ ಶುಲ್ಕ ಕಟ್ಟಲು ಅನೇಕ ಬಾರಿ ನೋಟಿಸ್ ನೀಡಲಾಗಿತ್ತು.
ನೋಟಿಸ್‍ಗೆ ಯಾವುದೇ ರೀತಿಯ ಉತ್ತರ ಬಾರದಿದ್ದರಿಂದ ಈ ವಿಮಾನವನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಈಗಾಗಲೇ ಮಲ್ಯ ಒಡೆತನದ ಆಸ್ತಿಪಾಸ್ತಿಗಳನ್ನು ಬ್ಯಾಂಕ್ ಮತ್ತು ಜಾರಿನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ