ಜು.2ರಂದು ಫ್ರೀಡಂಪಾರ್ಕ್‍ನಲ್ಲಿ ಕೃಷಿ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ

 

ಬೆಂಗಳೂರು, ಜೂ.30- ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದ ಖಾಸಗಿ ಕೃಷಿ ಕಾಲೇಜುಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಜು.2ರಂದು ಫ್ರೀಡಂಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಕೃಷಿ ವಿದ್ಯಾರ್ಥಿ ಸಂಘದ ಸಂಚಾಲಕ ರಮೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದೊಡ್ಡಬಳ್ಳಾಪುರದಲ್ಲಿರುವ ರೈ-ಟೆಕ್ ಕಾಲೇಜು ಮತ್ತು ಕಲಬುರಗಿಯಲ್ಲಿರುವ ಸಿಂಗಾನಿಯ ಕಾಲೇಜುಗಳನ್ನು ಮುಚ್ಚಿಸಿ ಅವುಗಳ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕೃಷಿ ವಿಶ್ವವಿದ್ಯಾನಿಲಯಗಳ 1963ರ ಕಾಯ್ದೆಗೆ ತಿದ್ದುಪಡಿ ತಂದು ಖಾಸಗಿ ಕೃಷಿ ಕಾಲೇಜು ಸ್ಥಾಪನೆ ಅನುಮತಿ ನಿರ್ಬಂಧಿಸಬೇಕು. ಪ್ರತಿ ವರ್ಷ ಸರ್ಕಾರದ ಇಲಾಖೆಗಳಲ್ಲಿ ಖಾಲಿಯಾಗುವ ಹುದ್ದೆಗಳನ್ನು ಭರ್ತಿ ಮಾಡಬೇಕು, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಶೀಘ್ರ ತುಂಬಬೇಕು. ಕೃಷಿ, ಎಂಜಿನಿಯರಿಂಗ್, ಕೃಷಿ ಮಾರುಕಟ್ಟೆ, ಅರಣ್ಯ ವಿಜ್ಞಾನ, ಆಹಾರ ವಿಜ್ಞಾನ, ಕೃಷಿ ಜೈವಿಕ ತಂತ್ರಜ್ಞಾನ, ರೇಷ್ಮೆ ಕೃಷಿ ಪದವೀಧರರಿಗೆ ಸೂಕ್ತ ಹುದ್ದೆ ಸೃಷ್ಟಿಸಬೇಕೆಂದು ಆಗ್ರಹಿಸಿದರು.
ಜುಲೈ 2ರಂದು ನಗರ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‍ವರೆಗೆ ಬೃಹತ್ ರ್ಯಾಲಿ ನಡೆಸಿ ನಂತರ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ