ಕಾವೇರಿ ನದಿನೀರು ಹಂಚಿಕೆ ನಿರ್ವಹಣಾ ಮಂಡಳಿ ರಚನೆ ವಿಚಾರ; ಕೇಂದ್ರ ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಸದಸ್ಯರು ಆಕ್ರೋಶ

 

ಬೆಂಗಳೂರು, ಜೂ.23- ಕಾವೇರಿ ನದಿನೀರು ಹಂಚಿಕೆ ನಿರ್ವಹಣಾ ಮಂಡಳಿ ರಚನೆ ಕುರಿತಂತೆ ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರೆ, ಪ್ರತಿಪಕ್ಷ ರಾಜ್ಯಸರ್ಕಾರದ ಧೋರಣೆಯನ್ನು ಕಟುವಾಗಿ ಟೀಕಿಸಿತು.
ವಿಧಾನಸೌಧದಲ್ಲಿಂದು ಬೆಳಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಆರಂಭಗೊಂಡ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಸಂಸದರು, ಶಾಸಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ನ್ಯಾಯವಾದಿಗಳು, ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

ರಾಜ್ಯಸರ್ಕಾರದ ಸಲಹೆ ಪಡೆಯದೆ ಏಕಪಕ್ಷೀಯವಾಗಿ ಕೇಂದ್ರ ಸರ್ಕಾರ ನಿರ್ವಹಣಾ ಮಂಡಳಿ ರಚಿಸಿದೆ ಎಂದು ಸಭೆಯಲ್ಲಿ ಟೀಕೆಗಳು ಕೇಳಿಬಂದವು. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು, ತಾತ್ಸಾರ ಮನೋಭಾವ ಮತ್ತು ಸರಿಯಾಗಿ ಸ್ಪಂದಿಸದಿರುವುದರಿಂದ ಈ ಪರಿಸ್ಥಿತಿ ಎದುರಾಗಿದೆ ಎಂದು ಸರ್ಕಾರದ ವಿರುದ್ಧ ಮಾತಿನ ಚಕಮಕಿ ನಡೆಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಮಧ್ಯಪ್ರವೇಶಿಸಿ, ರೈತರ ಹಾಗೂ ಜನರ ಹಿತ ಕಾಯಲು ನಾವೆಲ್ಲರೂ ಜತೆಯಾಗಿ ಕಾನೂನು ಸಮರಕ್ಕೆ ಅಣಿಯಾಗಬೇಕು. ಈ ರೀತಿ ಟೀಕೆ ಮಾಡಿದರೆ ಏನೂ ಪ್ರಯೋಜನವಿಲ್ಲ ಎಂದು ಸಲಹೆ ನೀಡಿದರು.
ಒಟ್ಟಾರೆ ಇಂದಿನ ಸಭೆಯಲ್ಲಿ ನಿರ್ವಹಣಾ ಮಂಡಳಿ ರಚನೆಯ ಸಾಧಕ-ಬಾಧಕಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಯಿತು. ಅದರ ಕಾರ್ಯವ್ಯಾಪ್ತಿ ಮತ್ತು ಅಧಿಕಾರ ಬಳಕೆ ಬಗ್ಗೆಯೂ ಸಭೆಯಲ್ಲಿ ಪಾಲ್ಗೊಂಡಿದ್ದ ಕಾವೇರಿ ವಿವಾದ ಸಂಬಂಧ ಸುಪ್ರೀಂಕೋರ್ಟ್‍ನಲ್ಲಿ ವಾದ ಮಂಡಿಸುತ್ತಿರುವ ರಾಜ್ಯದ ಪರ ವಕೀಲರು ವಿವರಣೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ