ಬೆಂಗಳೂರು,ಜೂ.30-ಸಚಿವ ಸಂಪುಟ ಸ್ಥಾನ ವಂಚಿತರಾಗಿ ಬಂಡಾಯ ಸಾರಿ ತಣ್ಣಗಾಗಿದ್ದ ಮಾಜಿ ಸಚಿವ ಲಿಂಗಾಯತ ಮುಖಂಡ ಎಂ.ಬಿ.ಪಾಟೀಲ್ ಅವರಿಂದು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಎಂ.ಬಿ.ಪಾಟೀಲ್ ಅವರನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಎಂ.ಬಿ.ಪಾಟೀಲ್ ಅವರು ಬಂಡಾಯವೆದ್ದಿದ್ದರು.
ನಾನು ಏಕಾಂಗಿಯಲ್ಲ.ನನ್ನ ಜೊತೆ ಹಲವರಿದ್ದಾರೆ ಎಂದು ಹೈಕಮಾಂಡ್‍ಗೆ ಸಂದೇಶ ರವಾನಿಸಿದ್ದರು. ಅಲ್ಲದೆ, ತಮ್ಮ ನಿವಾಸದಲ್ಲಿ ಅತೃಪ್ತರೊಂದಿಗೆ ಸಭೆ ನಡೆಸಿದ್ದರಲ್ಲದೆ, ಈ ಸಂದರ್ಭದಲ್ಲಿ ಹಲವು ರಾಜಕೀಯ ಬೆಳವಣಿಗೆಗಳು ಕೂಡ ನಡೆದಿದ್ದವು.
ತೀವ್ರ ಅಸಮಾಧಾನಗೊಂಡಿದ್ದ ಎಂ.ಬಿ.ಪಾಟೀಲ್ ಅವರನ್ನು ಮನವೊಲಿಸಲು ಕಾಂಗ್ರೆಸ್‍ನ ಮುಖಂಡರು ಸಾಕಷ್ಟು ಪ್ರಯತ್ನ ನಡೆಸಿದ್ದರು. ಖುದ್ದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೂ ಕೂಡ ಮಾತುಕತೆ ನಡೆಸಿದ್ದರು. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ದೆಹಲಿಗೆ ಕರೆಸಿಕೊಂಡು ಅವರೊಂದಿಗೆ ಚರ್ಚೆ ನಡೆಸಿದ್ದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಲು ತೆರಳಿದ್ದಾಗ ಬಂಡಾಯದ ಬಗ್ಗೆ ಯಾವುದೇ ಮಾತನಾಡಿರಲಿಲ್ಲ. ಎಂ.ಬಿ.ಪಾಟೀಲ್ ಮತ್ತು ಅತೃಪ್ತರೊಂದಿಗೆ ಅಂತರ ಕಾಯ್ದುಕೊಂಡಿದ್ದರು. ಇಂದು ಎಂ.ಬಿ.ಪಾಟೀಲ್ ಅರು ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ಒಂದು ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ ಸಂದರ್ಭದಲ್ಲಿ ಸಿದ್ದು, ಎಂ.ಬಿ.ಪಾಟೀಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಎಂ.ಬಿ.ಪಾಟೀಲ್ ಹಾಗೂ ಅತೃಪ್ತರ ವಿರುದ್ಧ ಹೈಕಮಾಂಡ್ ಮತ್ತು ಸಿದ್ದರಾಮಯ್ಯ ಗರಂ ಆಗಿದ್ದು, ರಾಜೀ ಸಂಧಾನ ನಡೆಸುವ ಹಿನ್ನೆಲೆಯಲ್ಲಿ ಎಂ.ಬಿ.ಪಾಟೀಲ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು ಎಂದು ತಿಳಿದುಬಂದಿದೆ.
ಸಿದ್ದು ಭೇಟಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಎಂ.ಬಿ.ಪಾಟೀಲ್ ಅವರು, ಸಿದ್ದರಾಮಯ್ಯ ಅವರು ಧರ್ಮಸ್ಥಳದ ಪ್ರಕೃತಿವನದಲ್ಲಿದ್ದಾಗ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಇಲ್ಲಿಗೆ ಬಂದು ಭೇಟಿ ಮಾಡಿ ಮಾತನಾಡಿದ್ದೇನೆ. ಯಾವುದೇ ರಾಜಕೀಯ ವಿಷಯ ಚರ್ಚಿಸಿಲ್ಲ ಎಂದು ತಿಳಿಸಿದರು.