ಬೆಂಗಳೂರು,ಜೂ.29- ಜುಲೈ 2ರಿಂದ ಆರಂಭವಾಗುವ ಅಧಿವೇಶನದಲ್ಲಿ ಬಜೆಟ್ ಮೇಲೆ ಚರ್ಚೆ ಮಾಡಲು ಹೆಚ್ಚಿನ ಕಾಲಾವಕಾಶ ನೀಡಲಾಗುವುದು ಎಂದು ವಿಧಾನಪರಿಷತ್‍ನ ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ಜುಲೈ 2ರಿಂದ 12ವರೆಗೆ ಮೇಲ್ಮನೆಯ ಕಲಾಪಗಳು ನಡೆಯಲಿವೆ. ಈ ಬಾರಿ ಬಹಳಷ್ಟು ಮಂದಿ ಹೊಸ ಸದಸ್ಯರು ವಿಧಾನಪರಿಷತ್‍ಗೆ ಬಂದಿದ್ದಾರೆ ಎಂದರು.
ಜುಲೈ 2ರಂದು ವಿಧಾನಮಂಡಲದ ಉಭಯ ಸದನಗಳನ್ನುದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲ ಅವರು ಭಾಷಣ ಮಾಡಲಿದ್ದಾರೆ. ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜು.5ರಂದು ಬಜೆಟ್ ಮಂಡನೆ ಮಾಡಲಿದ್ದಾರೆ.
ಈ ಬಾರಿಯ ಅಧಿವೇಶನದ ಅವಧಿ ಕಡಿಮೆ ಇರುವುದರಿಂದ ಪ್ರಶ್ನೋತ್ತರ ಕಲಾಪ ನಾಲ್ಕು ದಿನ ಮಾತ್ರ ಇರುತ್ತದೆ. ಸದನದ ಎಲ್ಲ ಕಾರ್ಯ ಕಲಾಪಗಳು ನಿಗದಿಯಂತೆ ನಡೆಯಲಿವೆ ಎಂದು ಹೇಳಿದರು.
ವಿಧಾನಪರಿಷತ್‍ನ ನೂತನ ಸದಸ್ಯ ಅ.ದೇವೇಗೌಡ ಮಾತನಾಡಿ, ಬೆಂಗಳೂರು ಪದವೀಧರ ಕ್ಷೇತ್ರದಿಂದ ತಮ್ಮ ಗೆಲುವಿಗೆ ಕಾರಣರಾದ ಎಲ್ಲ ಪದವೀಧರರು, ಶಿಕ್ಷಕರು ಹಾಗೂ ಪಕ್ಷದ ಎಲ್ಲ ನಾಯಕರಿಗೆ ಧನ್ಯವಾದ ಅರ್ಪಿಸಿದರು.