ಸಮ್ಮಿಶ್ರ ಸರ್ಕಾರದ ಅಸ್ಥಿರತೆಯ ಲಾಭ ಪಡೆಯುವ ಅವಶ್ಯಕತೆ ನಮಗಿಲ್ಲ: ವಿ.ಸೋಮಣ್ಣ

 

ಬೆಂಗಳೂರು,ಜೂ.29- ರಾಜ್ಯದ ಸಮ್ಮಿಶ್ರ ಸರ್ಕಾರದ ಅಸ್ಥಿರತೆಯ ಲಾಭ ಪಡೆಯುವ ಅವಶ್ಯಕತೆ ನಮಗಿಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ವಿಧಾನಪರಿಷತ್‍ನ ನೂತನ ಸದಸ್ಯರಾಗಿ ಅ.ದೇವೇಗೌಡ ಪ್ರಮಾಣ ವಚನ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸ್ಥಿರನೋ ಅಸ್ಥಿರನೋ ಗೊತ್ತಿಲ್ಲ. ಸ್ಥಿರವಾಗಿದ್ದರೆ ರಾಜ್ಯದ ಜನರಿಗೆ ಒಳ್ಳೆಯದಾಗುತ್ತದೆ. ಅಸ್ಥಿರವಾದರೆ ಜನರೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಸ್ವಲ್ಪ ದಿನ ನಡೆಯಲಿದೆ. ಸರ್ಕಾರಕ್ಕೆ ಬಿಜೆಪಿ ಏನೂ ಮಾಡುವುದಿಲ್ಲ ಎಂದ ಅವರು, ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರು ಅನುಭವಿ ರಾಜಕಾರಣಿಯಾಗಿದ್ದು, ಇಂತಹ ಸನ್ನಿವೇಶಗಳನ್ನು ಸಾಕಷ್ಟು ನೋಡಿದ್ದಾರೆ. ಅವರಿಗೆ ಎಲ್ಲಿ ಹೇಗೆ ದಾಳ ಬೀಸಬೇಕು ಎಂಬುದು ಗೊತ್ತಿದೆ ಎಂದರು.
ಬಜೆಟ್ ಮಂಡನೆಯಾದ ಬಳಿಕ ಎಲ್ಲವೂ ಸರಿ ಹೋಗುತ್ತದೆ ಎಂಬುದು ತಪ್ಪು ಗ್ರಹಿಕೆಯಾಗಿದೆ. ಮಂಡನೆಯಾಗಿರುವ ಬಜೆಟ್ ಅನುಷ್ಠಾನವಾದರೆ ನಮ್ಮ ರಾಜ್ಯ ರಾಮರಾಜ್ಯವಾಗುತ್ತಿತ್ತು. ಮಂಡನೆಯಾದ ಬಜೆಟ್‍ನಲ್ಲಿ ಕೆಲವು ಅನುಷ್ಠಾನಗೊಂಡರೆ ಮತ್ತೆ ಕೆಲವು ಅನುಷ್ಠಾನವಾಗುವುದಿಲ್ಲ.ಇದು ಬಜೆಟ್ ಮಂಡನೆಯ ಸಹಜ ಪ್ರಕ್ರಿಯೆ ಎಂದು ಸ್ಪಷ್ಟಪಡಿಸಿದರು.
ಪ್ರಯತ್ನ ಮಾಡಿದರೆ ಸಾಧನೆ ಮಾಡಬಹುದು ಎಂಬುದಕ್ಕೆ ಅ.ದೇವೇಗೌಡರು ಸಾಕ್ಷಿ. ತಾವು ಯಾವುದೇ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೋಗುವುದಿಲ್ಲ.ಅ.ದೇವೇಗೌಡರು ಅಜಾತಶತ್ರು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ