
ಜಮ್ಮು, ಜೂ.29-ಅಭೂತಪೂರ್ವ ಬಿಗಿ ಭದ್ರತೆಯೊಂದಿಗೆ ಅಮರನಾಥ ಯಾತ್ರೆಯ 2,876 ಯಾತ್ರಿಕರ ಮೂರನೇ ತಂಡ ಜಮ್ಮುವಿನ ಭಗವಂತ್ ನಗರದ ಮೂಲ ಶಿಬಿರದಿಂದ ಇಂದು ಮುಂಜಾನೆ ಪ್ರಯಾಣ ಬೆಳೆಸಿತು. ಈ ತಂಡ ಪ್ರಯಾಣಕ್ಕೆ ಭಾರೀ ಮಳೆ ಅಡ್ಡಿಯಾದರೂ ಅದನ್ನು ಲೆಕ್ಕಿಸದೇ ಯಾತ್ರಾರ್ಥಿಗಳು ಯಾತ್ರೆ ಮುಂದುವರಿಸಿದರು. 3,500 ಯಾತ್ರಾರ್ಥಿಗಳ ಎರಡನೇ ತಂಡ ನಿನ್ನೆ ಯಾತ್ರೆ ಆರಂಭಿಸಿತ್ತು. ಈ ತಂಡದಲ್ಲಿ 592 ಮಹಿಳೆಯರು ಮತ್ತು 160 ಸಾಧು-ಸಂತರು ಇದ್ದರು.
ವಿವಿಧ ರಾಜ್ಯಗಳ ಯಾತ್ರಿಕರು ಬಾಲ್ತಾಲ್ ಮತ್ತು ಪಹಲ್ಗಾಂನ ಎರಡು ಮೂಲ ಶಿಬಿರಗಳಿಂದ ಭದ್ರತಾಪಡೆಗಳ ಭಾರೀ ಬಂದೋಬಸ್ತ್ನಲ್ಲಿ ವಾಹನಗಳ ಮೂಲಕ ಪ್ರಯಾಣ ಬೆಳೆಸಿದರು. ಮೂರನೇ ತಂಡ ನಾಳೆಯಿಂದ 3,880 ಮೀಟರ್ಗಳಷ್ಟು ಎತ್ತರದಲ್ಲಿರುವ ಗುಹಾಂತರ ದೇವಾಲಯಕ್ಕೆ ಪಾದಯಾತ್ರೆ ಕೈಗೊಳ್ಳಲಿದೆ.
ಮಳೆಯಿಂದಾಗಿ 3,000 ಯಾತ್ರಿಕರಿದ್ದ ಮೊದಲ ತಂಡದ ಪ್ರಯಾಣಕ್ಕೆ ಮಾರ್ಗಮಧ್ಯೆ ಕೆಲಕಾಲ ವಿಳಂಬವಾಗಿತ್ತು. ವಿಶ್ವ ವಿಖ್ಯಾತ ಅಮರನಾಥ ಯಾತ್ರೆಗೆ ಭಯೋತ್ಪಾದಕರ ದಾಳಿ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಯಾತ್ರಿಕರ ರಕ್ಷಣೆಗಾಗಿ ಹಿಂದೆಂದೂ ಕಂಡು ಕೇಳರಿಯದ ಬಿಗಿ ಭದ್ರತೆ ಒದಗಿಸಲಾಗಿದೆ.
ಈ ಉದ್ದೇಶಕ್ಕಾಗಿ ಸಿಆರ್ಪಿಎಫ್ನ ವಿಶೇಷ ಮೋಟಾರ್ ಬೈಕ್ ದಳವನ್ನು ನಿಯೋಜಿಸಲಾಗಿದ್ದು, ಯಾತ್ರಿಕರ ಪ್ರತಿಯೊಂದು ವಾಹನಕ್ಕೆ ರೇಡಿಯೋ ಫ್ರಿಕೆನ್ಸಿ(ಆರ್ಎಫ್) ಟ್ಯಾಗ್ ಅಳವಡಿಸಲಾಗಿದೆ. ಇದರಿಂದಾಗಿ ಯಾತ್ರಾರ್ಥಿಗಳಿಗೆ ಪೂರ್ಣ ಪ್ರಮಾಣದ ಭದ್ರತೆ ಇರುತ್ತದೆ. ಇದೇ ಪ್ರಥಮ ಬಾರಿಗೆ ಕೇಂದ್ರೀಯ ಮೀಸಲು ಪೆÇಲೀಸ್ ಪಡೆ(ಸಿಆರ್ಪಿಎಫ್)ಯ ವಿಶೇಷ ಬೈಕ್ ಸ್ಕ್ವಾಡ್ ನಿಯೋಜಿಸಲಾಗಿದೆ. ಈ ದಳವನ್ನು ಯಾತ್ರಿಕರು ಮತ್ತು ಯಾತ್ರಾ ಮಾರ್ಗದ ಸುರಕ್ಷತೆ ಮತ್ತು ಭದ್ರತೆಗಾಗಿ ಬಳಸಲಾಗುವುದು. ಇದೇ ವೇಳೆ ಯಾತ್ರಿಕರಿಗಾಗಿ ಅವಶ್ಯ ಇರುವ ಕಡೆ ಮಿನಿ ಆಂಬ್ಯುಲೆನ್ಸ್ ರೂಪದಲ್ಲಿ ಉಪಯೋಗಿಸಲಾಗುವುದು.