ರಾಯಚೂರು,ಜೂ.29- ದೇವಸುಗೂರು ಮತ್ತು ಶಕ್ತಿನಗರದ ಜನರಿಗೆ ಉಚಿತವಾಗಿ ಬೂದಿಭಾಗ್ಯ ನೀಡುತ್ತಿರುವ ರಾಯಚೂರು ಶಾಖೋತ್ಪನ ವಿದ್ಯುತ್ ಉತ್ಪಾದನಾ ಘಟಕ( ಆರ್ಟಿಪಿಎಸ್). ತಾಲ್ಲೂಕಿನ ವಿದ್ಯುತ್ ಉತ್ಪಾದನಾ ಕೇಂದ್ರದ ದೇವಸಗೂರು ಮತ್ತು ಶಕ್ತಿನಗರದಲ್ಲಿ ಆರ್ಟಿಪಿಎಸ್ನಿಂದ ಬರುವ ಬೂದಿ ಗಾಳಿಯಲ್ಲಿ ಬೆರೆದು ಮತ್ತಷ್ಟು ಸಮಸ್ಯೆ ಉಲ್ಭಣವಾಗಿದೆ. ಬೂದಿ ರಸ್ತೆಯೆಲ್ಲ ಆವರಿಸಿ ದಾರಿ ಕಾಣದಂತಾಗಿದೆ. ಗಾಳಿಯಿಂದ ತೂರಿ ಬರುವ ಬೂದಿಯಿಂದಾಗಿ ಜನರ ಓಡಾಡಕ್ಕೆ ತೊಂದರೆಯಾಗುತ್ತಿದೆಯಲ್ಲದೆ ವಾಹನ ಸವಾರರಿಗೂ ತೀವ್ರ ಅಡಚಣೆಯಾಗುತ್ತಿದೆ. ಕಳೆದ ಎರಡು ತಿಂಗಳಿಂದ ಸಮಸ್ಯೆ ಉಲ್ಭಣಗೊಳ್ಳುತ್ತಲೇ ಇದ್ದರೂ ಆರ್ಟಿಪಿಎಸ್ನ ಯಾವೊಬ್ಬ ಅಧಿಕಾರಿಯು ಇದರ ಬಗ್ಗೆ ಗಮನಹರಿಸದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಗ್ರಾಮದಲ್ಲಿ ಹೆಚ್ಚಿರುವ ಹಾರುವ ಬೂದಿಯಿಂದ ಗ್ರಾಮಸ್ಥರಲ್ಲಿ ಟಿಬಿ ಮತ್ತು ಅಸ್ತಮದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಇಬ್ಬನಿಯಂತೆ ಹಾರಿಕೊಂಡು ಬರುವ ಬೂದಿ ಆವರಿಸುತ್ತಿರುವುದರಿಂದ ಸಾರ್ವಜನಿಕರು ಮನೆಯಿಂದ ಹೊರಬರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.