ಬೆಂಗಳೂರು, ಜೂ.29- ಪ್ರಕೃತಿ ಚಿಕಿತ್ಸೆಯಿಂದ ಹಿಂದುರುಗಿ ಬಂದಿರುವ ಸಿದ್ದರಾಮಯ್ಯ ಅವರನ್ನು ಹಲವಾರು ನಾಯಕರು ನಿರಂತರವಾಗಿ ಭೇಟಿ ಮಾಡುತ್ತಿರುವುದು ಕುತೂಹಲ ಕೆರಳಿಸಿದೆ.
ಇಂದು ಬೆಳಗ್ಗೆಯಿಂದಲೇ ಸಚಿವ ಕೆ.ಜೆ.ಜಾರ್ಜ್, ಮಾಜಿ ಸಚಿವರಾದ ಎ.ಮಂಜು, ಎಚ್.ವೈ.ಮೇಟಿ, ಚೆಲುವರಾಯಸ್ವಾಮಿ, ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ, ಶಾಸಕರಾದ ಎಂ.ಟಿ.ಬಿ.ನಾಗರಾಜ್, ಬಸವರಾಜ ಹಿಟ್ನಾಳ್ ಸೇರಿದಂತೆ ಹಲವಾರುನಾಯಕರು ಭೇಟಿ ಮಾಡಿದರು.
ಇಂದು ಬೆಳಗ್ಗೆ ಸಿದ್ದರಾಮಯ್ಯನವರನ್ನು ಭೇಟಿ ಮಾಡಲು ಹಲವಾರು ನಾಯಕರು ಆಗಮಿಸಿದ್ದರು. ಆದರೆ, ಬೆಳಗ್ಗೆ 10.30ರವರೆಗೂ ಸಿದ್ದರಾಮಯ್ಯ ಯಾರ ಭೇಟಿಗೂ ಅವಕಾಶ ನೀಡಿರಲಿಲ್ಲ.
ಅನಂತರ ಮನೆಯಿಂದ ಹೊರಗೆ ಬಂದರಾದರೂ ಕಾಂಗ್ರೆಸ್ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಬೇಕು ಎಂಬ ಕಾರಣಕ್ಕೆ ತೆರಳಿದರು. ಈ ನಡುವೆ ತಮ್ಮನ್ನು ಭೇಟಿ ಮಾಡಲು ಬಂದಿದ್ದವರೊಂದಿಗೆ ಆತ್ಮೀಯವಾಗಿ ಮಾತನಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಕೆಲವು ನಾಯಕರಿಗೆ ಸಂಜೆ ಅಥವಾ ನಾಳೆ ಭೇಟಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಈಗ ಪರ್ಯಾಯ ರಾಜಕೀಯ ಶಕ್ತಿ ಕೇಂದ್ರವಾಗಿದ್ದು, ಅವರ ನಡೆಗಳು ತೀವ್ರ ಕುತೂಹಲ ಕೆರಳಿಸಿವೆ. ಉಪಮುಖ್ಯಮಂತ್ರಿಯಾಗಿರುವ ಪರಮೇಶ್ವರ್ ಅವರಿಗಿಂತಲೂ ಹೆಚ್ಚಿನ ಶಾಸಕರು, ಜನನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಆಗಮಿಸುತ್ತಿದ್ದಾರೆ.
ಸಿದ್ದರಾಮಯ್ಯ ಅವರು ಒಂದು ಹಂತದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ನಡವಳಿಕೆಗಳ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನಂತರವೂ ಹಲವಾರು ನಾಯಕರು ಅವರನ್ನು ಭೇಟಿ ಮಾಡುತ್ತಿರುವುದು ರಾಜಕೀಯವಾಗಿ ಕುತೂಹಲ ಕೆರಳಿಸಿದೆ.