ಜು.1ರಂದು ಮೈತ್ರಿ ಸರ್ಕಾರದ ಮಹತ್ವದ ಸಮನ್ವಯ ಸಮಿತಿ ಸಭೆ

 

ಬೆಂಗಳೂರು, ಜೂ.29-ಮೈತ್ರಿ ಸರ್ಕಾರದಲ್ಲಿರುವ ಗೊಂದಲಗಳ ನಿವಾರಣೆಗೆ ಭಾನುವಾರ (ಜು.1)ಮಹತ್ವದ ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಕುಮಾರಸ್ವಾಮಿ ಸರ್ಕಾರ ಮಂಡಿಸಲಿರುವ ಬಜೆಟ್, ಸಾಲಮನ್ನಾ, ನಿಗಮ ಮಂಡಳಿಗಳ ನೇಮಕಾತಿ, ಪ್ರಮುಖವಾಗಿ ಎರಡು ಪಕ್ಷಗಳ ನಡುವಿನ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಕುರಿತು ಮಹತ್ವದ ಚರ್ಚೆ ನಡೆಯಲಿವೆ.

ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಲು ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಸಮಿತಿಯ ಅಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ರಾತ್ರಿ ಬೆಂಗಳೂರಿಗೆ ಬಂದಿದ್ದು, ತಮ್ಮ ಮನೆಯಲ್ಲಿ ರಾಜಕೀಯ ಕುರಿತು ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್, ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಡ್ಯಾನಿಶ್‍ಆಲಿ ಸಮನ್ವಯ ಸಮಿತಿ ಸದಸ್ಯರಾಗಿದ್ದು, ಬಹುತೇಕ ಎಲ್ಲರೂ ಭಾನುವಾರ ನಡೆಯಲಿರುವ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಕುಮಾ;ರಸ್ವಾಮಿ ಅವರ ಸರ್ಕಾರ ಹೊಸ ಬಜೆಟ್ ಮಂಡನೆಗೆ ಮುಂದಾದಾಗ ಆಕ್ಷೇಪ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಅವರು, ಪೂರಕ ಬಜೆಟ್ ಮಂಡನೆ ಸಾಕು ಎಂಬ ಹೇಳಿಕೆ ನೀಡಿದ್ದರು. ಆನಂತರ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಿದ್ದ ಅವರು,ಅಲ್ಲಿ ತಮ್ಮ ಬೆಂಬಲಿಗರೊಂದಿಗೆ ಮಾತನಾಡುವಾಗ ರೈತರ ಸಾಲ ಮನ್ನಾ, ಹೊಸ ಬಜೆಟ್ ಹಾಗೂ ಮೈತ್ರಿ ಸರ್ಕಾರದ ಆಯಸ್ಸು ಕುರಿತು ಲೋಕಾಭಿರಾಮವಾಗಿ ಮಾತನಾಡಿದ್ದರು. ಅದು ಬಹಿರಂಗಗೊಂಡು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ಅದರ ಬೆನ್ನಲ್ಲೇ ಕುಮಾರಸ್ವಾಮಿ ಅವರು ಹೊಸ ಬಜೆಟ್‍ನ ಬದಲಾಗಿ ಸಿದ್ದು ಬಜೆಟ್‍ನ ಎಲ್ಲಾ ಕಾರ್ಯಕ್ರಮಗಳನ್ನು ಮುಂದುವರೆಸುವ ಜತೆಗೆ ಮೈತ್ರಿ ಸರ್ಕಾರದ ಹೊಸ ಕಾರ್ಯಕ್ರಮಗಳನ್ನೂ ಪ್ರಕಟಿಸುವ ಪರಿಷ್ಕøತ ಬಜೆಟ್ ಮಂಡನೆಗೆ ತಯಾರಿ ನಡೆಸಿದ್ದಾರೆ.
ಈ ನಡುವೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣೆಯಲ್ಲಿ ನೀಡಿದ್ದ ಪ್ರಣಾಳಿಕೆಯನ್ನು ಆಧರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸುವ ಸಲುವಾಗಿ ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ರಚಿಸಿರುವ ಸಮಿತಿ ಎರಡು ಸಭೆಗಳನ್ನು ನಡೆಸಿದ್ದು, ವರದಿ ಅಂತಿಮ ಹಂತದಲ್ಲಿದೆ.
ಇಂದು ಈ ಸಮಿತಿಯಲ್ಲಿರುವ ಕಾಂಗ್ರೆಸ್ ಸದಸ್ಯರಾದ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ ಹಾಗೂ ವೀರಪ್ಪಮೊಯ್ಲಿ ಅವರು ಕಾಂಗ್ರೆಸ್ ಕಚೇರಿಯಲ್ಲಿ ಚರ್ಚೆ ನಡೆಸಿ ವರದಿಗೆ ಅಂತಿಮ ಸ್ವರೂಪ ನೀಡುತ್ತಿದ್ದಾರೆ.

ಸಮನ್ವಯ ಸಮಿತಿ ಸಭೆಗೂ ಮುನ್ನ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್‍ನ ಪ್ರಮುಖ ನಾಯಕರ ಜತೆ ಮಾತುಕತೆ ನಡೆಸಲು ಮುಂದಾಗಿದ್ದು, ಈಗಾಗಲೇ ಆಸ್ಕರ್‍ಫರ್ನಾಂಡೀಸ್, ಬಿ.ಕೆ.ಹರಿಪ್ರಸಾದ್ ಅವರುಗಳ ಸಲಹೆ ಪಡೆದಿದ್ದಾರೆ.
ಇಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಅವರು ಪರಸ್ಪರ ಭೇಟಿಯಾಗಿ ಚರ್ಚೆ ಮಾಡುವ ಸಮಯ ನಿಗದಿಯಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಖರ್ಗೆ ಅವರು ಕಾರಣಾಂತರಗಳಿಂದ ದೆಹಲಿಯಲ್ಲೇ ಉಳಿದಿರುವುದಿಂದ ಇಂದು ನಡೆಯಬೇಕಾಗಿದ್ದ ಸಭೆ ನಾಳೆಗೆ ಮುಂದೂಡಿಕೆಯಾಗಿದೆ.

ಪ್ರಮುಖ ನಾಯಕರಾದ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಕೆ.ಎಚ್.ಮುನಿಯಪ್ಪ ಸೇರಿದಂತೆ ಇತರರ ಜತೆ ಸಿದ್ದರಾಮಯ್ಯ ಸಮನ್ವಯ ಸಮಿತಿ ಸಭೆಗೂ ಮೊದಲು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ರೈತರ ಸಾಲ ಮನ್ನಾ ವಿಷಯದಲ್ಲಿ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆಯಾದರೂ ಬೃಹತ್ ಮಟ್ಟದ ಆರ್ಥಿಕ ಸಂಪನ್ಮೂಲ ಕ್ರೂಢೀಕರಣಕ್ಕೆ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ಚರ್ಚೆಗಳೂ ನಡೆಯುತ್ತಿವೆ.
ಸಾಲ ಮನ್ನಾ ಕಾರ್ಯಕ್ರಮದ ನಿಮಿತ್ತ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣಕಾಸಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಎರಡೂ ಪಕ್ಷಗಳ ನಾಯಕರು ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕು. ಬಹಿರಂಗವಾಗಿ ಹೇಳಿಕೆಗಳನ್ನು ನೀಡಬಾರದು ಎಂಬ ಕಡಿವಾಣ ಹಾಕಲು ಸಮನ್ವಯ ಸಮಿತಿಯಲ್ಲಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದ್ದೇಶಿಸಿ ಜು.2ರಂದು ಭಾಷಣ ಮಾಡಲಿದ್ದು, ಭಾಷಣದ ಪ್ರತಿಗೆ ಈಗಾಗಲೇ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ರಾಜ್ಯಪಾಲರ ಭಾಷಣ ಕುರಿತು ಸಮನ್ವಯ ಸಮಿತಿ ಸಭೆಯಲ್ಲಿ ಔಪಚಾರಿಕ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ಒಟ್ಟಿನಲ್ಲಿ ಭಾನುವಾರ ನಡೆಯಲಿರುವ ಮಹತ್ವದ ಸಮನ್ವಯ ಸಮಿತಿ ಸಭೆ ಮೈತ್ರಿ ಸರ್ಕಾರಕ್ಕೆ ಅತ್ಯಂತ ಪ್ರಮುಖವಾಗಿದ್ದು, ಹಲವಾರು ಗೊಂದಲಗಳನ್ನು ನಿವಾರಿಸಬೇಕಿದೆ. ಇಲ್ಲವಾದರೆ ಜು.2ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಮೈತ್ರಿ ಸರ್ಕಾರ ಇಕ್ಕಟ್ಟಿಗೆ ಸಿಲುಕುವುದು ಗ್ಯಾರಂಟಿ. ಈ ನಿಟ್ಟಿನಲ್ಲಿ ಎರಡೂ ಪಕ್ಷಗಳ ನಾಯಕರು ಸಭೆಗಾಗಿ ಭರ್ಜರಿ ಪೂರ್ವ ತಯಾರಿಗಳನ್ನು ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ