ಬೆಂಗಳೂರು, ಜೂ.29-ನಾನು ಕಾಂಗ್ರೆಸ್ನ ಹಿರಿಯ ಶಾಸಕನಾಗಿದ್ದು, ನನಗೆ ಸಚಿವ ಸ್ಥಾನವೇ ಬೇಕು. ನಿಗಮ ಮಂಡಳಿ ಬೇಡ ಎಂದು ಎಂ.ಟಿ.ಬಿ.ನಾಗರಾಜು ಪಟ್ಟುಹಿಡಿದ್ದಾರೆ.
ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ನನಗೆ ನಿಗಮ ಮಂಡಳಿ ಬೇಡ ಎಂದು ಹೇಳಿದರು.
ನನ್ನ ಅಭಿಪ್ರಾಯವನ್ನು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದೇನೆ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತೇನೆ. ಬೆಂಗಳೂರಿಗೆ ಆಗಮಿಸುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.
ಈ ಮೊದಲು ಸಚಿವ ಸಂಪುಟದಲ್ಲಿ ಅವಕಾಶ ಸಿಗದೇ ಇದ್ದ ಕಾರಣ ನಾಗರಾಜು ಅವರು ಸಿದ್ದರಾಮಯ್ಯ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು.
ನಿನ್ನೆ ಬೆಂಗಳೂರಿಗೆ ಬಂದ ಸಿದ್ದರಾಮಯ್ಯ ಅವರನ್ನು ಇಂದು ಬೆಳಗ್ಗೆ ಭೇಟಿ ಮಾಡಿ ಮಾತುಕತೆ ನಡೆಸಿ ಹಳೆಯ ಕಹಿ ನೆನಪುಗಳನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ.