ಬೆಂಗಳೂರು, ಜೂ.28-ಜಾಗತಿಕಮಟ್ಟದ ಸ್ಪರ್ಧೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡುತ್ತಿಲ್ಲ. ಉದ್ಯೋಗಗಳನ್ನೂ ಸೃಷ್ಟಿಸುತ್ತಿಲ್ಲ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಆರ್.ವಿ.ದೇಶಪಾಂಡೆ ಆಕ್ಷೇಪ ವ್ಯಕ್ತಪಡಿಸಿದರು.
ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಫ್ಕೆಸಿಸಿಐ)ಯ ಸರ್ವಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಭರವಸೆ ನೀಡಿದಂತೆ ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ. ಅದಕ್ಕೆ ಡಿಜಿಟಲೀಕರಣ ಸೇರಿದಂತೆ ಹಲವಾರು ಕಾರಣಗಳಿರಬಹುದು. ಆದರೆ, ಕೈಗಾರಿಕಾಭಿವೃದ್ಧಿಯ ನಿಟ್ಟಿನಲ್ಲಿ ಕೇಂದ್ರದ ಪ್ರಯತ್ನಗಳು ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಬಂಡವಾಳ ಹೂಡಿಕೆಯಲ್ಲಿ ಮುಂಚೂಣಿಯಲ್ಲಿದೆ. ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಈ ಮೊದಲು ಕೃಷಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಪ್ರತ್ಯೇಕವಾಗಿ ತರಬೇತಿ ನೀಡುತ್ತಿದ್ದವು. ಇದರಿಂದ ಯಾರು ಯಾವ ಚಟುವಟಿಕೆ ನಡೆಸುತ್ತಿದ್ದಾರೆ. ತರಬೇತಿಯ ಪ್ರತಿಫಲ ಯಾರಿಗೆ ಲಭ್ಯವಾಗಿದೆ ಎಂಬ ಮಾಹಿತಿಯೇ ಸಿಗುತ್ತಿರಲಿಲ್ಲ ಎಂದರು. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಇಲಾಖೆಗಳ ಯೋಜನೆಗಳನ್ನು ಕ್ರೂಢೀಕರಿಸಿ ತರಬೇತಿಗಾಗಿಯೇ ಕೌಶಲ್ಯಾಭಿವೃದ್ಧಿ ಇಲಾಖೆಯನ್ನು ಸ್ಥಾಪಿಸಿದ್ದಾರೆ. ಈಗ ನಮ್ಮ ಇಲಾಖೆ ಕೃಷಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಎಲ್ಲಾ ಇಲಾಖೆಗಳಿಗೂ ಅಗತ್ಯ ತರಬೇತಿಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಿದರು. ಎಫ್ಕೆಸಿಸಿಐನ ತರಬೇತಿ ಕೇಂದ್ರಕ್ಕಾಗಿಯೇ ದಾಬಸ್ಪೇಟೆ ಬಳಿ 1.6ಎಕರೆ ಜಮೀನು ನೀಡಲಾಗಿದೆ. ಇದು ಮುಂದಿನ ದಿನಗಳಲ್ಲಿ ಅತ್ಯಂತ ಉಪಯುಕ್ತ ಕೇಂದ್ರವಾಗಲಿದೆ. ರಾಜ್ಯದ ಯುವ ಶಕ್ತಿ ದೇಶದ ಆಸ್ತಿ. ಅವರಿಗೆ ದುಡಿಯಲು ಕೆಲಸ ಕೊಡಬೇಕು. ಕೌಶಲ್ಯಾಭಿವೃದ್ಧಿಯಿಂದ ಮಾತ್ರ ಅದು ಸಾಧ್ಯ. ಕೈಗಾರಿಕೆಗಳಿಗೆ ಅಗತ್ಯವಾದ ಸಿಬ್ಬಂದಿಗಳನ್ನು ಸಜ್ಜುಗೊಳಿಸಲು ಇಲಾಖೆ ಶ್ರಮಿಸುತ್ತಿದೆ ಎಂದು ಹೇಳಿದರು.
ಎಫ್ಕೆಸಿಸಿಐನ ಎಲ್ಲಾ ಒಳ್ಳೆಯ ಕೆಲಸಗಳಿಗೆ ಸರ್ಕಾರದ ಸಹಕಾರ ಇದೆ. ಅದೇ ರೀತಿ ಈ ಹಿಂದೆ ಸರ್ಕಾರದ ಹಲವಾರು ಕಾರ್ಯಕ್ರಮಗಳಿಗೆ ಎಫ್ಕೆಸಿಸಿಐ ಉತ್ತಮ ಸಹಕಾರ ನೀಡಿದೆ. ನಿರ್ಗಮಿತ ಅಧ್ಯಕ್ಷ ಕೆ.ರವಿ ಅವರ ಅವಧಿಯಲ್ಲಿ ಎಫ್ಕೆಸಿಸಿಐಗೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ಜಿಎಸ್ಟಿ ವಿಷಯದಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ. ಸಿಎಸ್ಆರ್ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸಿ ಉತ್ತಮ ಚಟುವಟಿಕೆ ನಡೆಸುವವರಿಗೆ ಪ್ರಶಸ್ತಿ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ಶ್ಲಾಘಿಸಿದರು.
ಎಫ್ಕೆಸಿಸಿಐನ ನಿರ್ಗಮಿತ ಅಧ್ಯಕ್ಷ ಕೆ.ರವಿ, ನೂತನ ಅಧ್ಯಕ್ಷ ಸುಧಾರಕ್ ಎಸ್.ಶೆಟ್ಟಿ, ನೂತನ ಉಪಾಧ್ಯಕ್ಷ ಜಿ.ಆರ್.ಜನಾರ್ಧನ್, ಹಿಂದಿನ ಅಧ್ಯಕ್ಷ ಎಂ.ಸಿ.ದಿನೇಶ್, ಪ್ರಧಾನಕಾರ್ಯದರ್ಶಿ ಎಚ್.ಎ.ಸಿ.ಪ್ರಸಾದ್ ಹಾಜರಿದ್ದರು.