ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಸೇವಾವಧಿ ಮುಂದುವರಿಸದಿರಲು ನಿರ್ಧಾರ

 

ಬೆಂಗಳೂರು,ಜೂ.28- ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಸೇವೆ ವಿಸ್ತರಿಸುವಂತೆ ಕೇಂದ್ರಕ್ಕೆ ಮಾಡಿದ್ದ ಮನವಿಯನ್ನು ಹಿಂಪಡೆದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮತ್ತೊಂದು ಪತ್ರ ಬರೆದಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಸಿ.ಎಸ್ .ರತ್ನಪ್ರಭಾ ಅವರ ಅಧಿಕಾರಾವಧಿ ಜೂನ್ 30ಕ್ಕೆ ಕೊನೆಗೊಳ್ಳಲಿದ್ದು, ಮೂರು ತಿಂಗಳ ಕಾಲ ಅವರ ಅಧಿಕಾರಾವಧಿ ವಿಸ್ತರಿಸುವಂತೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಇದೀಗ ಮತ್ತೊಂದು ಪತ್ರ ಬರೆದು ಜೂನ್ 30ಕ್ಕೆ ರತ್ನಪ್ರಭಾ ಅವರ ಸೇವಾವಧಿ ಮುಗಿಯಲಿ ಇದರಲ್ಲಿ ಯಾವುದೇ ಬದಲಾವಣೆ ಬೇಡ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಸಮ್ಮಿಶ್ರ ಸರ್ಕಾರದ ಅವಧಿ ಹಾಗೂ ಬಜೆಟ್ ಬಗ್ಗೆ ಹೇಳಿಕೆ ನೀಡಿದ್ದ ಸಿದ್ದರಾಮಯ್ಯರಿಗೆ ಟಾಂಗ್ ನೀಡಲು ಸಿದ್ದು ಆಪ್ತ ಅಧಿಕಾರಿಗಳ ವರ್ಗಾವಣೆ ಬೆನ್ನಲ್ಲೇ ಮತ್ತೊಂದು ಅಧಿಕಾರಿಗೆ ಕೊಕ್ ನೀಡಲಾಗುತ್ತಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.
ಸಿದ್ದರಾಮಯ್ಯ ಅವಧಿಯಲ್ಲಿ ನೇಮಕವಾಗಿದ್ದ ರತ್ನಪ್ರಭಾಗೆ ಕೊಕ್ ನೀಡಲು ಕುಮಾರಸ್ವಾಮಿ ನಿರ್ಧರಿಸಿದ್ದು, ಕೇಂದ್ರಕ್ಕೆ ಮರು ಪತ್ರ ಬರೆದು ಜೂನ್ 30 ಕ್ಕೆ ರತ್ನಪ್ರಭಾ ಅವರ ಅಧಿಕಾರ ಅವಧಿ ಮುಗಿಯಲಿ ಎಂದಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳಿಂದ ತಿಳಿದುಬಂದಿದೆ.
ಈ ಹಿಂದೆ ಸಿದ್ದರಾಮಯ್ಯ ಅವಧಿಯಲ್ಲಿ ನೇಮಕಗೊಂಡಿದ್ದ ರತ್ನಪ್ರಭಾ ವಿಧಾನಸಭಾ ಚುನಾವಣಾ ಕಾರಣಕ್ಕಾಗಿ ಮೂರು ತಿಂಗಳ ಸೇವೆ ವಿಸ್ತರಿಸುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ರಾಜ್ಯದ ಮನವಿಗೆ ಸ್ಪಂದಿಸಿದ್ದ ಕೇಂದ್ರ ಜೂನ್30 ರ ವರೆಗೆ ಸೇವೆ ವಿಸ್ತರಿಸಿತ್ತು.
ಅವಧಿ ಮುಕ್ತಾಯಗೊಳ್ಳುತ್ತಿದ್ದ ಕಾರಣ ಮತ್ತೆ 3 ತಿಂಗಳ ಕಾಲ ಸೇವಾವಧಿ ವಿಸ್ತರಣೆಗೆ ಇತ್ತೀಚೆಗಷ್ಟೇ ಕುಮಾರಸ್ವಾಮಿ ಪತ್ರ ಬರೆದಿದ್ದರು.ಅದರ ಬೆನ್ನಲ್ಲೇ ಈಗ ಮರು ಪತ್ರ ಬರೆದು ಅಚ್ಚರಿ ಮೂಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ