ಕೇವಲ 13000 ರೂ. ಪಡೆದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ

 

ಬೆಂಗಳೂರು,ಜೂ.28- ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಎಸ್‍ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದು, ವಿಚಾರಣೆ ವೇಳೆ ದಿನಕ್ಕೊಂದು ಕುತೂಹಲಕಾರಿ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ.
ಕೇವಲ 13000 ರೂ. ಪಡೆದು ಆರೋಪಿ ಪರಶುರಾಮ್ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಗೌರಿ ಅವರನ್ನು ಹತ್ಯೆ ಮಾಡುವುದಕ್ಕೆ ಬೆಂಗಳೂರಿಗೆ ಬರುವಾಗ ದುಷ್ಕರ್ಮಿಗಳು ಪರಶುರಾಮ್‍ಗೆ 3 ಸಾವಿರ ರೂ ಕೊಟ್ಟಿದ್ದರಂತೆ. ಗೌರಿ ಹತ್ಯೆಯಾದ ಬಳಿಕ 10,000 ರೂ. ಕೊಟ್ಟ ದುಷ್ಕರ್ಮಿಗಳು, ಪಿಸ್ತೂಲ್ ಪಡೆದುಕೊಂಡು ಸ್ಥಳದಿಂದ ಹೊರಟು ಹೋಗಿದ್ದಾರೆ, ಹಣ ಕೊಟ್ಟವರ ಮಾಹಿತಿ ಪರಶುರಾಮ್‍ಗೆ ಗೊತ್ತಿಲ್ಲ. ಆದರೆ ಮುಖ ನೋಡಿರುವ ಪರಶುರಾಮ್ ಗುರುತು ಹಿಡಿಯುವುದಾಗಿ ತಿಳಿಸಿದ್ದಾನೆಂದು ಹೇಳಲಾಗಿದೆ.
ವಾಗ್ಮೋರೆಗೆ ಹಣ ನೀಡಿದ ಮೂವರು ದುಷ್ಕರ್ಮಿಗಳಲ್ಲಿ ಇಬ್ಬರು ಕನ್ನಡ ಮಾತನಾಡುತ್ತಿದ್ದರೆ, ಮತ್ತೊಬ್ಬ ಹಿಂದಿ ಮಾತನಾಡುತ್ತಿದ್ದರು. ಮೂವರೂ ಹಿಂದೂ ಧರ್ಮದ ಬಗ್ಗೆ ತಿಳಿಸುತ್ತಿದ್ದರು. ಧರ್ಮಕ್ಕಾಗಿ ಏನನ್ನು ಬೇಕಾದರೂ ಮಾಡುವಂಥ ಮನಸ್ಥಿತಿಯನ್ನು ಹುಟ್ಟುಹಾಕಿದ್ದರು. ಬಳಿಕ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡುವಂತೆ ತಿಳಿಸಿದ್ದರು ಎಂದು ತಿಳಿದುಬಂದಿದೆ.

ಗೌರಿ ಯಾರೆಂಬುದೇ ತಿಳಿದಿರಲಿಲ್ಲ. ಗೌರಿ ಲಂಕೇಶ್ ಹಿಂದು ಧರ್ಮವನ್ನು ವಿರೋಧಿಸುತ್ತಿದ್ದರು. ಪ್ರಚೋದನಕಾರಿ ಭಾಷಣಗಳ ಮೂಲಕ ಹಿಂದು ಧರ್ಮಕ್ಕೆ ಅವಮಾನ ಮಾಡುತ್ತಿದ್ದಾರೆಂದು ಗೌರಿ ಭಾಷಣ ಮಾಡಿದ್ದ ಹಲವು ವಿಡಿಯೋಗಳನ್ನು ದುಷ್ಕರ್ಮಿಗಳು ವಾಗ್ಮೋರೆಗೆ ತೋರಿಸಿದ್ದು, ಈ ವೇಳೆ ಗೌರಿ ಮಾಡುತ್ತಿರುವುದು ಕ್ಷಮಿಸಲಾರದ ತಪ್ಪು ಎಂದು ಭಾವಿಸಿ ಹತ್ಯೆ ಮಾಡಲು ನಿರ್ಧರಿಸಿದ್ದೆ ಎಂದು ವಾಗ್ಮೋರೆ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಎಸ್‍ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಗೌರಿ ಹತ್ಯೆಗೆ ಒಪ್ಪಿಕೊಂಡಿದ್ದ ವಾಗ್ಮೋರೆಗೆ ಮೂವರು ದುಷ್ಕರ್ಮಿಗಳು 3,000 ಹಣ ನೀಡಿದ್ದರು. ಈ ಹಣವನ್ನು ಬಸ್ ಟಿಕೆಟ್ ಹಾಗೂ ಆಹಾರಕ್ಕೆ ಬಳಸಿಕೊಳ್ಳುವಂತೆ ತಿಳಿಸಿದ್ದರು. ವಾಗ್ಮೋರೆ ವಿಜಯಪುರದ ಸಿಂಧಗಿ ಮೂಲದವನಾಗಿದ್ದು, ಬೆಂಗಳೂರಿಗೆ ಪ್ರಯಾಣ ಬೆಳೆಸಲು ದುಷ್ಕರ್ಮಿಗಳು ಹಣವನ್ನು ನೀಡಿದ್ದರು. ಗೌರಿ ಹತ್ಯೆಯಾದ ಬಳಿಕ ವಾಗ್ಮೋರೆಗೆ ದುಷ್ಕರ್ಮಿಗಳು ರೂ.10,000 ನೀಡಿದ್ದರಂತೆ.
ಹತ್ಯೆ ಮಾಡಿದ ಬಳಿಕ ವಾಗ್ಮೋರೆ ಮನೆಗೆ ಬಂದಿದ್ದಾನೆ. ಇದಾದ 10 ದಿನಗಳ ಬಳಿಕ ಬೆಳಗಾವಿಗೆ ಬರುವಂತೆ ತಿಳಿಸಿದ ದುಷ್ಕರ್ಮಿಗಳು ಕಾಳೆ ಮೂಲಕ 10,000 ಹಣವನ್ನು ನೀಡಿದ್ದಾರೆ. ಈ ವೇಳೆ ನಾನು ಹಣಕ್ಕಾಗಿ ಅಲ್ಲ, ಧರ್ಮಕ್ಕಾಗಿ ಹತ್ಯೆ ಮಾಡಿದ್ದೇನೆಂದು ತಿಳಿಸಿದ್ದಾನೆ. ಬಳಿಕ ಕಾಳೆ, ಹಣದ ಅಗತ್ಯ ಬರುತ್ತದೆ ಎಂದು ಹೇಳಿ ನೀಡಿದ್ದಾನೆ. ಮುಂದಿನ ದಿನಗಳಲ್ಲಿ ಸಹಾಯ ಮಾಡುವುದಾಗಿ ತಿಳಿಸಿದ್ದ ವ್ಯಕ್ತಿಗಳಾರೂ ಇದೀಗ ವಾಗ್ಮೋರೆ ಸಹಾಯಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ