ಬೆಂಗಳೂರು, ಜೂ.28- ಉದ್ಯೋಗ ಸೃಷ್ಟಿ ಮತ್ತು ಗುತ್ತಿಗೆ ನೌಕರರ ಸೇವಾ ಭದ್ರತೆಯನ್ನು ಸಮ್ಮಿಶ್ರ ಸರ್ಕಾರದ ಕನಿಷ್ಠ ಕಾರ್ಯಕ್ರಮದಲ್ಲಿ ಸೇರ್ಪಡೆಯಾಗಬೇಕು ಮತ್ತು ಕರ್ನಾಟಕ ಉದ್ಯೋಗ ಆಯೋಗ ರಚನೆ ಮಾಡಬೇಕೆಂದು ಉದ್ಯೋಗಕ್ಕಾಗಿ ಯುವ ಜನರ ಸಂಘಟನೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಸರೋವರ್ ಬೆಂಕಿಕೆರೆ, ಚುನಾವಣೆ ಪೂರ್ವದಲ್ಲಿ ಉದ್ಯೋಗ ಕುರಿತಂತೆ ವಿವಿಧ ಪಕ್ಷಗಳು ನೀಡಿದ ಭರವಸೆ ಸಮ್ಮಿಶ್ರ ಸರ್ಕಾರದ ಆದ್ಯತೆಯಾಗಬೇಕು ಎಂದರು.
ಸಂಘಟನೆ ವತಿಯಿಂದ ಹೋರಾಟದ ಮೂಲಕ ಸರ್ಕಾರವನ್ನು ನಿರಂತರವಾಗಿ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ 95 ಲಕ್ಷದಷ್ಟು ನಿರುದ್ಯೋಗಿಗಳಿದ್ದಾರೆ. ಪ್ರತಿ ವರ್ಷ 8 ಲಕ್ಷ ಯುವಜನರು ಸೇರ್ಪಡೆಯಾಗುತ್ತಿದ್ದಾರೆ. ಈ ಎಲ್ಲಾ ನಿರುದ್ಯೋಗಿಗಳಿಗೆ ಉದ್ಯೋಗ ಆಯೋಗವನ್ನು ರಚಿಸಬೇಕೆಂದು ಮನವಿ ಮಾಡಿದರು.
ರಾಜ್ಯದಲ್ಲಿ ಲಕ್ಷಾಂತರ ಗುತ್ತಿಗೆ ನೌಕರರು ಅಭದ್ರತೆ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಎಲ್ಲಾ ಗುತ್ತಿಗೆ ನೌಕರರಿಗೆ ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆ 2018ನ್ನು ಜಾರಿಗೆ ತರಬೇತಿ. ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡುವ ಕಾನೂನಾತ್ಮಕ ಕ್ರಮ ಕೈಗೊಳ್ಳುವವರಿಗೆ ರಾಜ್ಯದಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರನ್ನು ಬೇಕಾಬಿಟ್ಟಿಯಾಗಿ ಕೆಲಸದಿಂದ ತೆಗೆಯುವುದನ್ನು ತಡೆದು ಅವರಿಗೆ ರಕ್ಷಣೆ ನೀಡಬೇಕು ಎಂದರು.
ಈ ಎಲ್ಲಾ ಬೇಡಿಕೆಗಳನ್ನು ಸಮ್ಮಿಶ್ರ ಸರ್ಕಾರ ಒಂದು ವೇಳೆ ನಿರ್ಲಕ್ಷಿಸಿದರೆ ಎರಡು ಕಚೇರಿಗಳ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.