
ಮಾಸ್ಕೋ: ಫಿಫಾ ವಿಶ್ವಕಪ್ 2018ರ ನಾಕೌಟ್ ಹಂತದ ಪಂದ್ಯಗಳಿಗೆ ಹೊಸ ರೀತಿಯ ಅಡಿಡಾಸ್ ಚೆಂಡುಗಳು ಬಳಕೆಯಾಗಲಿವೆ ಎಂದು ತಿಳಿದುಬಂದಿದೆ.
ಟೆಲ್ಸ್ಟಾರ್ ಮೆಷ್ಟಾ ಎಂಬುದು ಈ ನೂತನ ಚೆಂಡಿನ ಹೆಸರಾಗಿದ್ದು, ಇದು ಕೆಂಪು, ಬಿಳಿ ಮತ್ತು ಕಪ್ಪು ಬಣ್ಣವನ್ನು ಒಳಗೊಂಡಿದೆ. ರಷ್ಯನ್ ಭಾಷೆಯಲ್ಲಿ ‘ಮೆಷ್ಟಾ’ ಎಂದರೆ ಕನಸು ಅಥವಾ ಮಹಾತ್ವಾಕಾಂಕ್ಷೆ ಎಂಬ ಅರ್ಥವಿದೆ.
ವಿಶ್ವಕಪ್ ಟೂರ್ನಿ ಇದೀಗ ನಾಕೌಟ್ ಹಂತ ತಲುಪಿದ್ದು, ಈ ನಿರ್ಣಾಯಕ ಹಂತದಲ್ಲಿ ತಂಡಗಳು ಹೊಸ ಚೆಂಡಿನಲ್ಲಿ ಆಡಲಿವೆ.
ಲೀಗ್ ಹಂತದಲ್ಲಿ ಬಳಸುತ್ತಿರುವ ‘ಟೆಲ್ಸ್ಟಾರ್ 18’ ಚೆಂಡು ಕಪ್ಪು-ಬಿಳಿ ಬಣ್ಣದ ವಿನ್ಯಾಸದಿಂದ ಕೂಡಿದೆ. ಇದೀಗ ನೀಡಲಾಗಿರುವ ಕೆಂಪು ಬಣ್ಣ, ನಾಕೌಟ್ ಹಂತದಲ್ಲಿ ವಿಶ್ವಕಪ್ ಬಿಸಿ ಏರಿರುವುದನ್ನು ಪ್ರತಿಬಿಂಬಿಸಲಿದೆ.
ಜೂನ್ 30ರ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇದು ಮೊದಲ ಬಾರಿ ಬಳಕೆಯಾಗಲಿದೆ.