
ಬೆಂಗಳೂರು, ಜೂ.28- ಹಳ್ಳಿಗಳಲ್ಲೂ ಕೂಡ ಸಿನಿಮಾ ಬಗ್ಗೆ ಒಳ್ಳೆ ಅಭಿರುಚಿ ಬೆಳೆಸಿ ಅಕಾಡೆಮಿಯನ್ನು ಮಾದರಿಯನ್ನಾಗಿ ಮಾಡುವ ಕನಸನ್ನು ಹೊಂದಿದ್ದೇನೆ ಎಂದು ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಇಂದಿಲ್ಲಿ ತಿಳಿಸಿದರು.
ವಾರ್ತಾ ಭವನದಲ್ಲಿಂದು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ನನ್ನನ್ನು ನೇಮಿಸಿರುವ ಸರ್ಕಾರಕ್ಕೆ ನಾನು ಅಭಾರಿಯಾಗಿದ್ದಾನೆ, ಇದಕ್ಕೆ ಕಾರಣಕರ್ತರಾಗಿರುವ ಚಿತ್ರರಂಗದ ಗಣ್ಯರಿಗೂ ಹಾಗೂ ಸಾಹಿತಿಗಳಿಗೆ ನಾನು ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು.
ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಾನು ಮೂರು ದಶಕಗಳಿಂದ ಪುಸ್ತಕಗಳನ್ನು ಬರೆಯುತ್ತ, ಸಿನಿಮಾ ನಿರ್ದೇಶನ ಮಾಡುತ್ತ ಬಂದಿದ್ದೇನೆ. ಅಕಾಡೆಮಿ ಆರಂಭವಾಗುವ ಮುನ್ನವೇ ಚಿತ್ರೋದ್ಯಮಕ್ಕೆ ವಿಶ್ವವಿದ್ಯಾಲಯದ ರೀತಿಯಲ್ಲಿ ಒಂದು ಅಕಾಡೆಮಿ ಬೇಕು ಎಂದು ಒತ್ತಾಯಿಸಿದವರಲ್ಲಿ ನಾನು ಕೂಡ ಒಬ್ಬ ಎಂದರು. ಚಿತ್ರ ಸಮಾಜ ಸೃಷ್ಟಿಗೆ ನನ್ನ ಮೊದಲ ಆದ್ಯತೆ, ಹಳ್ಳಿಗಳಲ್ಲಿ ಸಿನಿಮೋತ್ಸವ ನಡೆಸುವುದು, ಪಠ್ಯ ಪುಸ್ತಕದಲ್ಲಿ ಸಿನಿಮಾದ ತಾಂತ್ರಿಕ ವಿಷಯದ ಬಗ್ಗೆ ಮಾಹಿತಿ ನೀಡಬೇಕು, ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ದಿನಾಂಕವನ್ನು ನಿಗದಿಪಡಿಸಬೇಕೆಂದು ನಿರ್ಧರಿಸುವುದಾಗಿ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್ ದಿನೇಶ್ ಮಾತನಾಡಿ, ಚಲನಚಿತ್ರ ಅಕಾಡೆಮಿಯನ್ನು ರಾಜ್ಯ ಸರ್ಕಾರ ನಡೆಸಿಕೊಂಡು ಬರುತ್ತಿದ್ದು ನಾಗತಿಹಳ್ಳಿ ಚಂದ್ರಶೇಖರ್ ಅವರು 4ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, 17 ಚಿತ್ರಗಳನ್ನು ನಿರ್ದೇಶಿಸಿರುವ ಚಂದ್ರಶೇಖರ್ ಅವರಿಗೆ ಕಳೆದ ಬಾರಿಯ ಪುಟ್ಟಣ್ಣ ಕಣಗಾಲರ ಪ್ರಶಸ್ತಿ ಲಭಿಸಿದೆ. ಹಲವರು ಪುಸ್ತಕಗಳನ್ನು ರಚಿಸಿ, ವಿಭಿನ್ನ ಶೈಲಿಯ ಚಿತ್ರಗಳನ್ನು ಜನರಿಗೆ ನೀಡಿದ್ದಾರೆ. ಈ ಸಾಧನೆಯನ್ನು ಗಮನಿಸಿದ ಸರ್ಕಾರ ಅವರನ್ನು ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿದೆ, ಇವರು ಕೈಗೊಳ್ಳುವ ಕಾರ್ಯಗಳಿಗೆ ನಮ್ಮ ಪೆÇ್ರೀ ಸದಾ ಇರುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಾರ್ತಾ ಇಲಾಖೆ ಆಯುಕ್ತರಾದ ಹರ್ಷ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.