ಬೆಂಗಳೂರು,ಜೂ.28- ಸರ್ಕಾರಿ ಬಂಗಲೆ ನೀಡುವಂತೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಬರೆದ ಪತ್ರಕ್ಕೆ ಸರ್ಕಾರ ಇನ್ನೂ ಸ್ಪಂದಿಸಿಲ್ಲ. ತಿಂಗಳಾದರೂ ಬಿಎಸ್‍ವೈಗೆ ಇನ್ನೂ ಸಿಕ್ಕಿಲ್ಲ ಸರ್ಕಾರಿ ಅಧಿಕೃತ ನಿವಾಸ ಭಾಗ್ಯ!
ಹೌದು, ಪ್ರತಿಪಕ್ಷ ನಾಯಕರಿಗೆ ಸರ್ಕಾರವೇ ವಸತಿ ವ್ಯವಸ್ಥೆ ಸಲ್ಲಿಸಲಿದೆ. ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ ಬಂಗಲೆಗಳಲ್ಲಿ ಒಂದನ್ನು ನೀಡಲಾಗುತ್ತದೆ. ಅದರಂತೆ ಪ್ರತಿಪಕ್ಷ ನಾಯಕರಾಗಿ ಅಧಿಕೃತವಾಗಿ ಆಯ್ಕೆಯಾದ ನಂತರ ಅಧಿಕೃತ ನಿವಾಸಕ್ಕೆ ಬಿ.ಎಸ್.ಯಡಿಯೂರಪ್ಪ ಬೇಡಿಕೆ ಇಟ್ಟಿದ್ದರು. ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ವೇಳೆ ವಾಸವಿದ್ದ ರೇಸ್ ಕೋರ್ಸ್ ರಸ್ತೆಯ ನಿವಾಸವನ್ನೇ ಮಂಜೂರು ಮಾಡಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿ ಪತ್ರವನ್ನೂ ಬರೆದಿದ್ದರು. ಲಕ್ಕಿ ಮನೆ ಎನ್ನುವ ಕಾರಣಕ್ಕೆ ಯಡಿಯೂರಪ್ಪ ಅದೇ ಮನೆಯ ಬೇಡಿಕೆ ಇರಿಸಿದ್ದಾರೆ.
ಸರ್ಕಾರಿ ನಿವಾಸಕ್ಕೆ ಮನವಿ ಸಲ್ಲಿಸಿ ಒಂದು ತಿಂಗಳು ಕಳೆದಿದೆ. ಆದರೂ ಸರ್ಕಾರಿ ನಿವಾಸ ಕುರಿತು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದೆ ಪ್ರತಿಪಕ್ಷ ನಾಯಕ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಇದೀಗ ಸರ್ಕಾರಿ ಬಂಗಲೆ ಮಂಜೂರಾತಿಗೂ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಎದುರಿಸುವಂತಾಗಿದೆ.
ಆದರೆ ಸರ್ಕಾರ ಇನ್ನೂ ಸರ್ಕಾರಿ ಬಂಗಲೆಗಳ ಹಂಚಿಕೆ ಪ್ರಕ್ರಿಯೆ ಆರಂಭಿಸಿಲ್ಲ. ಹಿಂದಿನ ಸರ್ಕಾರದ ಸಚಿವರಲ್ಲಿ ಹಲವರು ಇನ್ನೂ ಸರ್ಕಾರಿ ನಿವಾಸವನ್ನು ಖಾಲಿ ಮಾಡಿಲ್ಲ. ಹಾಗಾಗಿ ಸರ್ಕಾರಿ ಬಂಗಲೆಗಳ ಹಂಚಿಕೆ ವಿಳಂಬವಾಗಿದೆ ಎಂಬ ಮಾಹಿತಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿ ಮೂಲಗಳಿಂದ ತಿಳಿದುಬಂದಿದೆ.