ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ನಮ್ಮ ಗುರಿ: ಮಲ್ಲಿಕಾರ್ಜುನ ಖರ್ಗೆ

 

ನವದೆಹಲಿ, ಜೂ.27- ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ನಮ್ಮ ಗುರಿ, ಅದಕ್ಕೆ ಎಷ್ಟೇ ತೊಂದರೆ ಬಂದರೂ ಸಹಿಸಿಕೊಂಡು ಮೈತ್ರಿ ಸರ್ಕಾರವನ್ನು ಮುನ್ನಡೆಸಬೇಕಿದೆ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಮೈತ್ರಿ ಸರ್ಕಾರಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಏಕ ರೀತಿಯ ಅಭಿಪ್ರಾಯಗಳು ಹೆಚ್ಚಾಗಬೇಕು. ಭಿನ್ನ ಹೇಳಿಕೆಗಳು ಒಳ್ಳೆಯದಲ್ಲ. ಕೆಲವು ನಾಯಕರು ತಮ್ಮ ಮನಸ್ಸಿಗೆ ಬಂದಂತೆ ಮಾತನಾಡಿರುವುದನ್ನು ನಾನು ಮಾಧ್ಯಮದಲ್ಲಿ ನೋಡಿದ್ದೇನೆ. ಅವರ ಅಭಿಪ್ರಾಯಗಳು ಅಥವಾ ಹೇಳಿಕೆಗಳನ್ನು ತಿರುಚಲಾಗಿದೆಯೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಅದು ವಾಸ್ತವದ ಹೇಳಿಕೆಗಳಾಗಿದ್ದರೆ ಅನಗತ್ಯ ವಿವಾದ ಸೃಷ್ಟಿಸುವ ಹೇಳಿಕೆಗಳನ್ನು ಯಾರೂ ನೀಡಬಾರದು ಎಂದು ಸಲಹೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರು ಬೆಂಬಲಿಗರ ಜತೆ ಮಾತನಾಡಿರುವ ವಿಡಿಯೋವನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ . ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ಒಂದು ವೇಳೆ ವಿಡಿಯೋವನ್ನು ತಿರುಚಿರುವ ಸಾಧ್ಯತೆಗಳೂ ಇವೆ. ಸತ್ಯಾಂಶ ಏನು ಎಂಬುದನ್ನು ಸಿದ್ದರಾಮಯ್ಯ ಅವರನ್ನೇ ಕೇಳಬೇಕಿದೆ ಎಂದರು.
ನಾನು ಇನ್ನೊಂದೆರಡು ದಿನಗಳಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅವರ ಜತೆ ಮಾತುಕತೆ ನಡೆಸಲಿದ್ದೇನೆ. ಕಾಂಗ್ರೆಸ್ ಹೈಕಮಾಂಡ್ ರಾಜ್ಯದಲ್ಲಿ ನqಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಖರ್ಗೆ ಪ್ರತಿಕ್ರಿಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ