ಮಾಸ್ಕೋ: ಫುಟ್ಬಾಲ್ ಕ್ಷೇತ್ರದ ಪ್ರಮುಖ ದಂತಕಥೆ ಆಟಗಾರರ ಕುರಿತು ಎಲ್ಲರೂ ಕೇಳಿರಬಹುದು. ಅತ್ಯುತ್ತಮ ಆಟಗಾರರೊಂದಿಗೆ ಅತ್ಯುತ್ತಮ ರೆಫರಿಗಳೂ ಕೂಡ ಇರುತ್ತಾರೆ. ಈ ಪೈಕಿ ‘ಮಹಾ ಹಠಮಾರಿ’ ತೀರ್ಪುಗಾರ ಕು’ಖ್ಯಾತಿ’ ಪಡೆದಿರುವ ಪಿಯರ್ಲುಗಿ ಕೊಲಿನಾ ಕೂಡ ಒಬ್ಬರು.
ಇಟಲಿ ಮೂಲದ ಪಿಯರ್ಲುಗಿ ಕೊಲಿನಾ ಫುಟ್ಬಾಲ್ ಕ್ಷೇತ್ರ ಮಹಾ ಕಠಿಣ ತೀರ್ಪುಗಾರ ಎಂದು ಖ್ಯಾತಿ ಗಳಿಸಿದವರು. ಖ್ಯಾತನಾಮ ಫುಟ್ಬಾಲಿಗರೇ ಇವರ ತೀರ್ಪಿಗೆ ಚಕಾರವೆತ್ತಲು ಹಿಂಜರಿಯುತ್ತಾರೆ. ಅಷ್ಟು ಪ್ರಾಮಾಣಿಕ ಮತ್ತು ನಿಖರ ತೀರ್ಪುಗಾರರು ಇವರು ಎಂದು ಹೇಳಲಾಗುತ್ತದೆ. ಫುಟ್ಬಾಲ್ ಕ್ಷೇತ್ರಕಂಡ ಅತ್ಯುತ್ತಮ ತೀರ್ಪುಗಾರರಲ್ಲಿ ಪಿಯರ್ಲುಗಿ ಕೊಲಿನಾ ಕೂಡ ಒಬ್ಬರು, ಬಹುಶಃ ಫುಟ್ಬಾಲ್ ಆಟಗಾರರಲ್ಲದೇ ಅಭಿಮಾನಿಗಳನ್ನು ಹೊಂದಿರುವ ಏಕೈಕ ರೆಫರಿ ಈ ಪಿಯರ್ಲುಗಿ ಕೊಲಿನಾ ಎಂದು ಹೇಳಬಹುದು.
ತಮ್ಮ ವೃತ್ತಿ ಜೀವನದಲ್ಲಿ 373 ಪಂದ್ಯಗಳಲ್ಲಿ ರೆಫರಿಯಾ ಕಾರ್ಯ ನಿರ್ವಹಿಸಿರುವ ಪಿಯರ್ಲುಗಿ ಕೊಲಿನಾ, ಒಟ್ಟು 1204 ಬಾರಿ ಹಳದಿ ಕಾರ್ಡ್ ಮತ್ತು 111 ಬಾರಿ ರೆಡ್ ಕಾರ್ಡ್ ತೋರಿಸಿದ್ದಾರೆ. ಆಟಗಾರ ಯಾರೇ ಆಗಿರಲಿ, ಯಾವುದೇ ತಂಡಕ್ಕೆ ಸೇರಿರಲಿ, ವಾದ ಮಾಡಲು ಬಂದರೆ ಅವರದೇ ಧಾಟಿಯಲ್ಲಿ ತಿರುಗೇಟು ನೀಡುತ್ತಾರೆ. ಫುಟ್ಬಾಲ್ ಕ್ಷೇತ್ರದ ದಂತಕಥೆ ಡೇವಿಡ್ ಬೆಕ್ಹಾಮ್ ಕೂಡ ಒಮ್ಮೆ ಇದೇ ರೆಫರಿಯಿಂದಾಗಿ ರೆಡ್ ಕಾರ್ಡ್ ಪಡೆದು ಅಂಗಳದಿಂದ ಹೊರಗುಳಿದಿದ್ದರು.
ಈ ಹಿಂದೆ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪಿಯರ್ಲುಗಿ ಕೊಲಿನಾಗೆ ಸಂದರ್ಶಕರು, ಪಂದ್ಯದ ವೇಳೆ ನಿಮಗೆ ಯಾರಾದರೂ ಒತ್ತಡ ಹೇರಿದ್ದರೇ? ಅಥವಾ ಹೀಗೆ ಮಾಡು ಎಂದು ನಿರ್ದೇಶನ ನೀಡಿದ್ದರೆ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಪಿಯರ್ಲುಗಿ ಕೊಲಿನಾ, ಅಷ್ಟು ಧೈರ್ಯ ಯಾರಿಗೂ ಇಲ್ಲ ಎಂದು ಹೇಳಿದ್ದರು. ಅವರ ಚಿಕ್ಕದ ಉತ್ತರವೇ ಅವರು ಎಷ್ಟು ನಿಷ್ಠೂರ ತೀರ್ಪುಗಾರ ಎಂದು ಹೇಳುತ್ತದೆ. ಫುಟ್ಬಾಲ್ ಕ್ಷೇತ್ರದಲ್ಲಿ ಖ್ಯಾತನಾಮ ಆಟಗಾರರೂ ಸೇರಿದಂತೆ ಎಲ್ಲ ಆಟಗಾರರೂ ಗೌರವಿಸುವ ವ್ಯಕ್ತಿ ಈ ಪಿಯರ್ಲುಗಿ ಕೊಲಿನಾ.
ಪಿಯರ್ಲುಗಿ ಕೊಲಿನಾ 2005ರಲ್ಲಿ ನಿವೃತ್ತಿ ಘೋಷಣೆ ಮಾಡಿದ್ದರು. ಇದಾದ ಕೆಲವೇ ವರ್ಷಗಳ ಬಳಿಕ ತೀರ್ಪುಗಾರರ ಸಂಸ್ಥೆಗೆ ಅಧ್ಯಕ್ಷರಾಗಿ ಕೊಲಿನಾ ಆಯ್ಕೆಯಾದರು. ಫುಟ್ಬಾಲ್ ಕ್ಷೇತ್ರದ ಏಕೈಕ ಸ್ಟಾರ್ ತೀರ್ಪುಗಾರ ಈ ಪಿಯರ್ಲುಗಿ ಕೊಲಿನಾ..