ಬೆಂಗಳೂರು, ಜೂ.26- ರಾಜ್ಯ ರಾಜಕಾರಣದಲ್ಲಿ ಭಾರೀ ಅಲ್ಲೋಲಕಲ್ಲೋಲವನ್ನು ಸೃಷ್ಟಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುರಿತು ಮಾತನಾಡಿದ್ದನ್ನು ಮಾಧ್ಯಮಗಳಿಗೆ ಉದ್ದೇಶಪೂರ್ವಕವಾಗಿಯೇ ಸೋರಿಕೆ ಮಾಡಲಾಯಿತೆ ?
ಇಂಥದ್ದೊಂದು ಅನುಮಾನ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯನವರ ಆಪ್ತರೇ ಖಾಸಗಿ ಸುದ್ದಿವಾಹಿನಿಗಳಿಗೆ ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.
ಭಾನುವಾರ ಧರ್ಮಸ್ಥಳ ಸಮೀಪದ ಉಜರೆಯಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರ ಆರೋಗ್ಯ ವಿಚಾರಿಸುವ ನೆಪದಲ್ಲಿ ಶಾಸಕರಾದ ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಮುನಿರತ್ನ ಹಾಗೂ ಕೆಲವೇ ಕೆಲವರು ಭೇಟಿ ನೀಡಿದ್ದರು.
ಶಿಷ್ಟಾಚಾರದ ಪ್ರಕಾರ ಮಾಜಿ ಮುಖ್ಯಮಂತ್ರಿಗೆ ಸಾಮಾನ್ಯವಾಗಿ ಎಸ್‍ಪಿ ದರ್ಜೆಯ ಅಧಿಕಾರಿ ಅಂತದವರೆಗೆ ಭದ್ರತೆ ನೀಡಲಾಗುತ್ತದೆ. ಅವರು ಉಳಿದುಕೊಂಡಿರುವ ಕೊಠಡಿ, ಹೋಗಿ ಬರುವವರ ಮೇಲೆ ಪೆÇಲೀಸರು ಸದಾ ಹದ್ದಿನ ಕಣ್ಣಿಟ್ಟಿರುತ್ತಾರೆ.
ಇನ್ನು ಸಿದ್ದರಾಮಯ್ಯನವರ ಜತೆ ರಹಸ್ಯವಾಗಿ ಮಾತುಕತೆ ನಡೆಸುವಾಗ ಆಪ್ತರಿಗೆ ಮಾತ್ರ ಅವಕಾಶವಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇಷ್ಟು ರಹಸ್ಯವಾಗಿ ಮಾತನಾಡಿದ್ದನ್ನು ಮೊಬೈಲ್‍ನಲ್ಲಿ ಸೆರೆಹಿಡಿದು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದು ಯಾರು ಎಂಬ ಪ್ರಶ್ನೆ ಎದುರಾಗಿದೆ.
ಇದ್ದ ಮೂವರಲ್ಲಿ ಕದ್ದವರ್ಯಾರು ಎಂಬ ನಾಣ್ನುಡಿಯಂತೆ ಭಾನುವಾರ ಬೆಳಗ್ಗೆ ಸಿದ್ದರಾಮಯ್ಯನವರ ಜತೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಾಸಕರು ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದರು.
ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆಯೂ ಇದೇ ಶಾಸಕರು ಸಿದ್ದರಾಮಯ್ಯನವರ ಜತೆ ಆತ್ಮಿಯರಾಗಿದ್ದರು. ಇವರನ್ನು ಸಿದ್ದರಾಮಯ್ಯನವರ ಎಸ್‍ಪಿಜಿ ಎಂದೇ ಕರೆಯಲಾಗುತ್ತಿತ್ತು. ಆಪ್ತ ವಲಯದಲ್ಲಿ ಆತ್ಮೀಯವಾಗಿ ಮಾತನಾಡಿದ್ದನ್ನು ಮೊಬೈಲ್‍ನಲ್ಲಿ ಚಿತ್ರೀಕರಣ ಮಾಡಿ ಅಷ್ಟು ಬೇಗ ಖಾಸಗಿ ಮಾಧ್ಯಮವೊಂದಕ್ಕೆ ಬಿಡುಗಡೆ ಮಾಡಿದ ಕೈ ಯಾರ ಎಂಬ ಜಿಜ್ಞಾಸೆ ಕಾಡುತ್ತಿದೆ.
ಇನ್ನು ತಾವು ಆಡಿದ ಮಾತುಗಳು ಸರ್ಕಾರದ ಮೇಲೆ ಇಷ್ಟು ಪರಿಣಾಮ ಬೀರಬಹುದು ಎಂಬುದನ್ನು ಸಿದ್ದರಾಮಯ್ಯವರು ಕೂಡ ಊಹಿಸಿರಲಿಲ್ಲ. ಪ್ರಾರಂಭದಲ್ಲಿ ಮಾಧ್ಯಮಗಳಿಗೆ ಸೋರಿಕೆಯಾದರೂ ಆಗಲಿ ಎಂದು ಅಂದುಕೊಂಡಿದ್ದರು.
ಆದರೆ, ನಿನ್ನೆ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಆಡಿದ ಒಂದೊಂದು ಮಾತಿಗೂ ಪರೋಕ್ಷವಾಗಿ ಲೆಕ್ಕ ಚುಕ್ತ ಮಾಡಿದ್ದು, ಕೈ ಕೈ ಹಿಸಿಕೊಳ್ಳುವಂತೆ ಮಾಡಿದೆ. ಈಗಲೂ ಎಲ್ಲರನ್ನು ಕಾಡುತ್ತಿರುವುದು ಸೋರಿಕೆಯಾಗಿದ್ದು ಹೇಗೆ…?