ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ: ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆ

 

ಬೆಂಗಳೂರು, ಜೂ.26-ಈ ಬಾರಿಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಗೆ ಮತದಾನ ಪ್ರಾರಂಭವಾಗಿದ್ದು, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಕೆ ಮಾಡಿರುವುದು ವಿಶೇಷ.
ಪ್ರತಿ ವರ್ಷ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಬೇಕು. ಆದರೆ, ಕಾರಣಾಂತರಗಳಿಂದ ಕಳೆದ ಎರಡೂವರೆ ವರ್ಷಗಳಿಂದ ಚುನಾವಣೆ ನಡೆದಿರಲಿಲ್ಲ. ಮಂಡಳಿಯಲ್ಲಿ ನಿರ್ಮಾಪಕರ, ವಿತರಕರ ಹಾಗೂ ಪ್ರದರ್ಶಕರ ವಲಯಗಳಿದ್ದು, ಒಂದೊಂದು ವರ್ಷ ಒಂದು ವಲಯಕ್ಕೆ ಅಧ್ಯಕ್ಷಗಾದಿಗೆ ಅವಕಾಶ ಸಿಗುತ್ತದೆ.

ಈ ಬಾರಿ ವಿತರಕರ ವಲಯಕ್ಕೆ ಅವಕಾಶ ಸಿಕ್ಕಿದ್ದು, ದೊಡ್ಡಮನೆ ಕುಟುಂಬದಿಂದ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್‍ಕುಮಾರ್ ಅವರ ಸಹೋದರ ಎಸ್.ಎ.ಚಿನ್ನೇಗೌಡ ಅವರು ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿದ್ದಾರೆ. ಮಾರ್ಸ್ ಸುರೇಶ್ ಪ್ರತಿ ಸ್ಪರ್ಧಿಯಾಗಿದ್ದಾರೆ.
ಉಳಿದಂತೆ ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಆಯ್ಕೆಗೂ ಚುನಾವಣೆ ನಡೆಯಲಿದ್ದು, ಇದರಲ್ಲಿ ಕೆಲವು ವಲಯಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ವಾಣಿಜ್ಯ ಮಂಡಳಿ ಕಟ್ಟಡ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಮೂರು ವಲಯಗಳ ಸದಸ್ಯರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಈ ಬಾರಿಯ ಚುನಾವಣೆ ಬಹಳಷ್ಟು ಕುತೂಹಲ ಕೆರಳಿಸಿದ್ದು, ಸಂಜೆ ವೇಳೆಗೆ ಫಲಿತಾಂಶ ಹೊರ ಬೀಳಲಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಗಾದಿಯನ್ನು ಈ ಬಾರಿ ಡಾ.ರಾಜ್‍ಕುಟುಂಬದ ಚಿನ್ನೇಗೌಡರು ಅಲಂಕರಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ