ಬೆಂಗಳೂರು, ಜೂ.26-ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಹೈಕಮಾಂಡ್ ವರಿಷ್ಠರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆಗೆ ಅನಗತ್ಯವಾಗಿ ಆಕ್ಷೇಪ ವ್ಯಕ್ತಪಡಿಸಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿರುವ ಅವರು, ಈ ರೀತಿಯಾದರೆ ಸಮ್ಮಿಶ್ರ ಸರ್ಕಾರದ ಏಳಿಗೆಗೆ ಧಕ್ಕೆಯಾಗುತ್ತದೆ. ಅವರನ್ನು ನಿಯಂತ್ರಣದಲ್ಲಿ ಇಡಬೇಕು ಎಂದು ಹೈಕಮಾಂಡ್ ನಾಯಕರ ಬಳಿ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.
ಪೂರ್ಣ ಬಜೆಟ್ ಮಂಡಿಸುವುದು ಬೇಡ, ಪೂರಕ ಬಜೆಟ್ ಮಂಡಿಸಿದರೆ ಸಾಕು ಎಂದು ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಹೇಳಿದ್ದರು.
ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ಭೇಟಿ ಮಾಡಿದ ಹಲವರು ಶಾಸಕರ ಜೊತೆ ಕುಮಾರಸ್ವಾಮಿ ಅವರ ಬಜೆಟ್ ಮಂಡನೆ ಹಾಗೂ ಸಾಲ ಮನ್ನಾ ಪ್ರಸ್ತಾಪದ ವಿಷಯಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದ ವಿಷಯ ಮಾಧ್ಯಮಗಳಲ್ಲಿ ಬಹಿರಂಗವಾಗಿತ್ತು. ಅಲ್ಲದೆ, ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ನಿನ್ನೆ ಇದರಿಂದ ಆಕ್ರೋಶಗೊಂಡ ಕುಮಾರಸ್ವಾಮಿ ಅವರೂ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಇಂತಹ ಬೆಳವಣಿಗೆಗಳು ನಡೆದರೆ ವಿಪಕ್ಷಗಳಿಗೆ ದಾಳವಾಗುತ್ತದೆ. ಪದೇ ಪದೇ ಅಡ್ಡಿಯಾದರೆ ಸುಗಮವಾಗಿ ಸರ್ಕಾರ ನಡೆಸಲು ತೊಂದರೆಯಾಗುತ್ತದೆ ಎಂದು ಕಾಂಗ್ರೆಸ್ ಹೈಕಮಾಂಡ್ ನಾಯಕರ ಜೊತೆ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.