ಬೆಂಗಳೂರು, ಜೂ.26-ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ರಾಜ್ಯ ಕ್ಯಾನ್ಸರ್ ಸಂಸ್ಥೆ ಸಂಕೀರ್ಣವನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಜೂ.28 ರಂದು ಲೋಕಾರ್ಪಣೆ ಮಾಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ನಿರ್ದೇಶಕ ಡಾ.ಕೆ.ಬಿ.ಲಿಂಗೇಗೌಡ ಅವರು 120 ಕೋಟಿ ರೂ. ವೆಚ್ಚದಲ್ಲಿ ಈ ಸಂಕೀರ್ಣ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ್ದು, ರಾಜ್ಯ ಸರ್ಕಾರ 30 ಕೋಟಿ ರೂ.ಗಳನ್ನು ನೀಡಿದೆ ಎಂದರು.
ರೇಡಿಯೋಥೆರಪಿ, ರೋಬೋಟಿಕ್ ಸರ್ಜರಿ, ಯಂತ್ರೋಪಕರಣ ಸೇರಿದಂತೆ ಕ್ಯಾನ್ಸರ್ ಚಿಕಿತ್ಸಾ ಉಪಕರಣಗಳನ್ನು ಹಾಗೂ ಸೂಕ್ತ ಮೂಲಸೌಲಭ್ಯಗಳನ್ನು ಈ ಸಂಕೀರ್ಣ ಒಳಗೊಂಡಿದೆ. 2015ರಲ್ಲಿ ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಜ್ಯ ಕ್ಯಾನ್ಸರ್ ಸಂಸ್ಥೆ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.
ಹನ್ನೊಂದೂವರೆ ಕೋಟಿ ರೂ. ವೆಚ್ಚದಲ್ಲಿ ಬೋನ್‍ಮ್ಯಾರೋ ಚಿಕಿತ್ಸಾ ಕೇಂದ್ರವನ್ನು ಇನ್ನೊಂದು ವರ್ಷದಲ್ಲಿ ಪ್ರಾರಂಭಿಸಲಾಗುತ್ತದೆ. ಇದಕ್ಕೆ ಹನ್ನೊಂದೂವರೆ ಕೋಟಿ ರೂ.ವೆಚ್ಚವಾಗಲಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಂಟೂವರೆ ಕೋಟಿ ರೂ. ನೆರವನ್ನು ರಾಜ್ಯ ಸರ್ಕಾರದಿಂದ ನೀಡಲು ಒಪ್ಪಿದ್ದಾರೆ. ದುಬಾರಿ ವೆಚ್ಚದ ಈ ಚಿಕಿತ್ಸೆ ರೋಗಿಗಳಿಗೆ ಕಡಿಮೆ ದರದಲ್ಲಿ ಇನ್ನೊಂದು ವರ್ಷದಲ್ಲಿ ಲಭ್ಯವಾಗಲಿದೆ. ಅದೇ ರೀತಿ ಪೆಟ್‍ಸ್ಕ್ಯಾನಿಂಗ್ ಯಂತ್ರ ಖರೀದಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೊಂದು ವರ್ಷದಲ್ಲಿ ಅದೂ ಕೂಡ ಕಿದ್ವಾಯಿ ಆಸ್ಪತ್ರೆಯಲ್ಲಿ ಲಭ್ಯವಾಗಲಿದೆ ಎಂದು ಹೇಳಿದರು.
ಬಡ ರೋಗಿಗಳಿಗೆ ಅತ್ಯಾಧುನಿಕ ಯಂತ್ರೋಪಕರಣಗಳಿಂದ ಕ್ಯಾನ್ಸರ್ ರೋಗಕ್ಕೆ ಕಡಿಮೆ ದರದಲ್ಲಿ ಚಿಕಿತ್ಸಾ ಸೌಲಭ್ಯವನ್ನು ಕಿದ್ವಾಯಿ ಆಸ್ಪತ್ರೆ ನೀಡುತ್ತಿದೆ. ಪ್ರಸ್ತುತ 625 ಹಾಸಿಗೆಗಳ ಸಾಮಥ್ರ್ಯವಿದ್ದು, 250 ಒಳರೋಗಿಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯವಿದೆ ಎಂದರು.
ಪ್ರತಿವರ್ಷ ಸುಮಾರು 18 ಸಾವಿರ ಹೊಸ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ಸುಮಾರು ಎರಡೂವರೆ ಲಕ್ಷ ರೋಗಿಗಳು ಚಿಕಿತ್ಸಾ ನಂತರದ ಆರೈಕೆಗೆ ಬರುತ್ತಾರೆ. ಈಶಾನ್ಯ ಹಾಗೂ ಉತ್ತರ ಭಾರತದ ಶೇ.20ರಷ್ಟು ರೋಗಿಗಳು ಈ ಆಸ್ಪತ್ರೆಗೆ ಬರುತ್ತಿದ್ದು, ದೇಶದ ಎರಡನೇ ದೊಡ್ಡ ಕ್ಯಾನ್ಸರ್ ಆಸ್ಪತ್ರೆ ಇದಾಗಿದ್ದು, ಚಿಕಿತ್ಸೆ ಗುಣಮಟ್ಟದಲ್ಲಿ ಮೂರನೇ ಸ್ಥಾನ ಪಡೆದಿದೆ ಎಂದು ಹೇಳಿದರು.
ಕಿದ್ವಾಯಿ ಆಸ್ಪತ್ರೆಗೆ ಬಡರೋಗಿಗಳ ಸಂಖ್ಯೆಯೇ ಹೆಚ್ಚಾಗಿದ್ದು, ಇನ್ಫೋಸಿಸ್ ಸೇರಿದಂತೆ ಹಲವು ಸಂಸ್ಥೆಗಳು ಕೂಡ ನೆರವು ನೀಡುತ್ತಿವೆ ಎಂದರು.
ಕ್ಯಾನ್ಸರ್ ಸಂಸ್ಥೆ ಸಂಕೀರ್ಣ ಉದ್ಘಾಟನಾ ಸಮಾರಂಭಕ್ಕೆ ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಜೆ.ಪಿ.ನಡ್ಡಾ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ.ಲೋಕೇಶ್, ಡಾ.ರವಿಕುಮಾರ್, ಡಾ.ರಾಮಚಂದ್ರ ಹಾಗೂ ಕಿದ್ವಾಯಿ ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಸಿದ್ದಲಿಂಗಸ್ವಾಮಿ ಉಪಸ್ಥಿತರಿದ್ದರು.