ನಿಮ್ಮ ಕಟ್ಟಡಗಳನ್ನು ಬಾಡಿಗೆಗೆ ಕೊಡುವ ಮುನ್ನ ಸ್ವಲ್ಪ ಯೋಚಿಸಿ…

 

ಬೆಂಗಳೂರು, ಜೂ.26-ಆಸ್ತಿ ಮಾಲೀಕರೇ ಎಚ್ಚರ…! ನಿಮ್ಮ ಕಟ್ಟಡಗಳನ್ನು ಬಾಡಿಗೆಗೆ ಕೊಡುವ ಮುನ್ನ ಸ್ವಲ್ಪ ಯೋಚಿಸಿ… ಇಲ್ಲದಿದ್ದರೆ ಬಿಬಿಎಂಪಿಯ ಭ್ರಷ್ಟ ಅಧಿಕಾರಿಗಳು ಬಾಡಿಗೆದಾರರಿಗೇ ನಿಮ್ಮ ಆಸ್ತಿಯನ್ನು ಖಾತೆ ಮಾಡಿಕೊಟ್ಟು ಬಿಡುತ್ತಾರೆ ಹುಷಾರು…!

ಇದಕ್ಕೊಂದು ಅಪ್ಪಟ ಉದಾಹರಣೆ ಇಲ್ಲಿದೆ. ನಗರದ ಹೃದಯಭಾಗದಲ್ಲಿರುವ ಜೆ.ಸಿ.ರಸ್ತೆಯಲ್ಲಿ ಹಳೆಯ ಶಿವಾಜಿ ಟಾಕೀಸ್(92/1)ಇದೆ. ಕಟ್ಟಡದ ಮೇಲೆ ಶಿವಾಜಿಯ ಅಶ್ವಾರೂಢ ಪ್ರತಿಮೆ ಕೂಡ ಇದ್ದು, ಇದು ಪಾರಂಪರಿಕ ಕಟ್ಟಡವಾಗಿದೆ. ಏನಿಲ್ಲವೆಂದರೂ ಇದು 50 ಕೋಟಿಗೂ ಹೆಚ್ಚು ಬೆಲೆಬಾಳುವ ಆಸ್ತಿ. ಈ ಆಸ್ತಿಯ ಮಾಲೀಕರು ಅನಸೂಯಬಾಯಿ.
ಈಕೆ 1993-94ರಲ್ಲಿ ಸುಮನ್ ನರಹರಿ ಎಂಬುವರಿಗೆ ಈ ಕಟ್ಟಡವನ್ನು ಲೀಸ್‍ಗೆ ಕೊಟ್ಟಿದ್ದರು. ಆಸ್ತಿ ತೆರಿಗೆಯನ್ನು ನೀವೇ ಪಾವತಿಸಿಕೊಂಡು ಹೋಗುವಂತೆ ಒಡಂಬಡಿಕೆಯಾಗಿತ್ತು.
ಲೀಸ್‍ಗೆ ಪಡೆದ ಸುಮನ್ ನರಹರಿ 2009ರವರೆಗೂ ಟ್ಯಾಕ್ಸ್ ಕಟ್ಟಿದ್ದರು. 2010ರ ನಂತರ ಆಸ್ತಿ ತೆರಿಗೆ ಪಾವತಿಸದೆ ಕೈ ಬಿಟ್ಟರು. ಸುಮಾರು 9 ವರ್ಷ ಆಸ್ತಿ ತೆರಿಗೆ ಪಾವತಿಸಲೇ ಇಲ್ಲ.

ಈ ಮಧ್ಯೆ ಅನಸೂಯಬಾಯಿ ಮೃತಪಟ್ಟರು. ಅವರ ಪುತ್ರ ಎಸ್.ಆರ್.ಕುಮಾರ್ ಎಂಬುವರು ಲೀಸ್ ಪಡೆದವರಿಗೆ ಟ್ಯಾಕ್ಸ್ ಕಟ್ಟುವಂತೆ ಪದೇ ಪದೇ ಹೇಳುತ್ತಿದ್ದರೂ ಅವರು ಸ್ಪಂದಿಸಲೇ ಇಲ್ಲ. ಲೀಸ್ ಪಡೆದವರ ವರ್ತನೆಯಿಂದ ಬೇಸತ್ತ ಎಸ್.ಆರ್.ಕುಮಾರ್ ಬಿಬಿಎಂಪಿಗೆ ಬಂದು ದಾಖಲೆ ಪರಿಶೀಲಿಸಿದರು. ಆಗ ಅವರಿಗೆ ಅಚ್ಚರಿ ಕಾದಿತ್ತು.
ಬಿಬಿಎಂಪಿಯ ಭ್ರಷ್ಟ ಅಧಿಕಾರಿಗಳು ಶಿವಾಜಿ ಕಟ್ಟಡವನ್ನು ಭೋಗ್ಯಕ್ಕೆ ಪಡೆದಿದ್ದ ಸುಮನ್ ನರಹರಿ ಮತ್ತು ಇತರೆ 10 ಮಂದಿಗೆ ಇಡೀ ಆಸ್ತಿಯನ್ನು ಖಾತಾ ಮಾಡಿಕೊಟ್ಟಿರುವುದು ಗೊತ್ತಾಗಿ ಬೆಚ್ಚಿಬಿದ್ದಿದ್ದಾರೆ.
ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಹೋರಾಟ ನಡೆಸಿರುವ ಎಸ್.ಆರ್.ಕುಮಾರ್ ಅನ್ಯಾಯ ಸರಿಪಡಿಸುವಂತೆ ಅಂಗಲಾಚುತ್ತಿದ್ದಾರೆ. ಆದರೂ ಇವರ ಮಾತಿಗೆ ಕವಡೆಕಾಸಿನ ಕಿಮ್ಮತ್ತು ಸಿಕ್ಕಿಲ್ಲ.
ಖಾತೆ ಮಾಡುವಾಗ ಸೇಲ್‍ಡೀಡ್ ಕಡ್ಡಾಯ. ಸೇಲ್‍ಡೀಡ್ ಅನಸೂಯಬಾಯಿ ಅವರ ಹೆಸರಿನಲ್ಲಿದೆ. ಆದರೆ ಸುಮನ್ ನರಹರಿ ಹಾಗೂ 10 ಮಂದಿ ಹೆಸರಲ್ಲಿ ಸೇಲ್‍ಡೀಡ್ ಇಲ್ಲದಿದ್ದರೂ ಅದ್ಯಾವ ಮಾನದಂಡದ ಮೇಲೆ ಅಧಿಕಾರಿಗಳು ಖಾತೆ ಮಾಡಿಕೊಟ್ಟರು ಎಂಬುದೇ ಅಚ್ಚರಿ.

ಆಕ್ರೋಶ: ಪಾಲಿಕೆ ಅಧಿಕಾರಿಗಳು ನಡೆಸಿರುವ ಕರ್ಮಕಾಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು, ಅನಸೂಯಬಾಯಿ ಕುಟುಂಬಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು, ತಪ್ಪಿತಸ್ಥ ಅಧಿಕಾರಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಈ ಮಾಲೀಕರನ್ನು ವಂಚಿಸಿರುವವರ ವಿರುದ್ಧವೂ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇಂತಹ ವಂಚನೆಯಲ್ಲಿ ಇದೊಂದು ಪ್ರಕರಣ ಮೇಲ್ನೋಟಕ್ಕೆ ಕಂಡುಬಂದಿದ್ದರೂ, ನಗರದಲ್ಲಿ ಇಂತಹ ಪ್ರಕರಣಗಳು ಇನ್ನೂ ಬಹಳಷ್ಟು ನಡೆದಿರಬಹುದು. ಹಾಗಾಗಿ ಕಟ್ಟಡ ಮಾಲೀಕರು ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕು ಎಂದು ಪದ್ಮನಾಭರೆಡ್ಡಿ ಹೇಳಿದ್ದಾರೆ.
ಅನ್ಯಾಯಕ್ಕೊಳಗಾದ ಮಾಲೀಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.
ನಮ್ಮ ಆಸ್ತಿ ನಮಗೆ ಕೊಡಿಸಿ:
ಪಾಲಿಕೆ ಅಧಿಕಾರಿಗಳ ಭ್ರಷ್ಟಾಚಾರದಿಂದಾಗಿ ಇಂದು ನಮ್ಮ ಕೋಟ್ಯಂತರ ರೂ. ಆಸ್ತಿ ಕೈಬಿಟ್ಟು ಹೋಗುವಂತಾಗಿದೆ. ನಮಗಾಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡಿ ಎಂದು ಅನಸೂಯಬಾಯಿ ಪುತ್ರ ಎಸ್.ಆರ್.ಕುಮಾರ್ ಅವರು ಮೇಯರ್, ಉಪಮೇಯರ್ ಹಾಗೂ ಕಂಡ ಕಂಡ ಅಧಿಕಾರಿಗಳ ಬಳಿ ಗೋಗರೆಯುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ