ಬೆಂಗಳೂರು:ಜೂ-26: ಮಾದಕ ವಸ್ತುಗಳ ಬಳಕೆಯನ್ನು ನಿಯಂತ್ರಣಕ್ಕೆ ತರುವುದಲ್ಲದೆ, ಈ ಬಗ್ಗೆ ಶಾಲಾ, ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.
ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನವನ್ನು ಜನರಲ್ಲಿ ಅರಿವು ಮೂಡಿಸುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸಬೇಕಿದೆ.
ಇಡೀ ವಿಶ್ವದಲ್ಲಿ ಮಾದಕವಸ್ತುಗಳ ಬಳಕೆ ಕಾನೂನು ಬಾಹಿರವಾಗಿ ಬಳಸುತ್ತಿದ್ದಾರೆ. ಇದು ಅಪರಾಧವಾಗಿದ್ದು, ಕಾನೂನು ರೀತ್ಯ ಶಿಕ್ಷೆ ಕೂಡ ಆಗಲಿದೆ.
ಇಂದಿನ ಕೆಲ ಯುವಜನ, ಮಕ್ಕಳು ಮಾದಕ ವ್ಯಸನಿಗಳಾಗುತ್ತಿದ್ದು, ತಮ್ಮ ಸುಂದರ ಜೀವನವನ್ನೇ ಬಲಿಕೊಡುತ್ತಿದ್ದಾರೆ.
ಇದರಿಂದ ಅವರ ಇಡೀ ಕುಟುಂಬ ಕೂಡ ನೋವಿನಲ್ಲಿ ನರಳುವಂತೆ ಮಾಡುತ್ತಿದ್ದಾರೆ. ಕೆಲವೇ ನಿಮಿಷದ ಸುಖಕ್ಕಾಗಿ ಇಡೀ ಜೀವನವನ್ನು ಹಾಳು ಮಾಡಿಕೊಳ್ಳುವ ಕೆಲಸಕ್ಕೆ ಯುವಕರು ಮುಂದಾಗಬಾರದು ಎಂದು ಕಿವಿಮಾತು ಹೇಳಿದ್ದಾರೆ.
ಶಾಲಾ ಕಾಲೇಜುಗಳಲ್ಲಿ ಕಾನೂನು ಬಾಹಿರವಾಗಿ ಯಾರಾದರೂ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದರೆ ಅಂಥವರ ಬಗ್ಗೆ ಸಾರ್ವಜನಿಕರು ದೂರು ನೀಡಲಿ. ಇದರಿಂದ ಯುವಕರ ಭವಿಷ್ಯ ಹಾಳಾಗುವುದನ್ನು ತಡೆಯುವುದರ ಜತೆಗೆ, ಆರೋಪಿಗಳಿಗೆ ಶಿಕ್ಷೆಯಾಗಲಿದೆ.
ನೇರ ಬಂದು ದೂರು ನೀಡಲು ಸಾಧ್ಯವಾಗದಿದ್ದರೆ ನಗರ ಸಂಚಾರ ಪೊಲೀಸರು ತೆರೆದಿರುವ 1908 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ, ಮಾಹಿತಿ ನೀಡಬಹುದು ಎಂದರು.
ಪ್ರತಿ ವರ್ಷ ಮಾದಕ ವಸ್ತು ವಿರೋಧಿ ದಿನವನ್ನು ಕೇವಲ ಆಚರಿಸಿ ಸುಮ್ಮನಾದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸುವ ಆಂದೋಲನವಾಗಬೇಕು. ಯಾರೂ ಕೂಡ ಮಾದಕ ವ್ಯಸನಿಗಳಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.
Dr.G parameshwar,Stop Drug abuse,1908 toll free