
ದಾವಣಗೆರೆ, ಜೂ.25-ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ನೀರಿನ ತೊಂದರೆ ನಿವಾರಿಸಲು ಹರಿಹರ ತಾಲ್ಲೂಕು ರಾಜನಹಳ್ಳಿ ಹತ್ತಿರ ತುಂಗಭದ್ರ ನದಿಗೆ 97.74 ಕೋಟಿ ರೂ. ವೆಚ್ಚದ ಬ್ಯಾರಲ್ ನಿರ್ಮಾಣ ಕಾಮಗಾರಿಯನ್ನು ತುರ್ತಾಗಿ ಕೈಗೊಳ್ಳಲು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಸ್ಮಾರ್ಟ್ ಸಿಟಿ ಯೋಜನೆಯ ಅಧ್ಯಕ್ಷ ಉಮಾಶಂಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ಶಾಸಕರು ಅಧಿಕಾರಿಗಳಿಗೆ ಆದೇಶಿಸಿದರು. ಈ ಬ್ಯಾರೆಲ್ ನಿರ್ಮಾಣದಿಂದ ನರಕ್ಕೆ 24/7 ಅವಧಿಯಲ್ಲಿ ನೀರು ಪೂರೈಸುವ ಜಲಸಿರಿ ಯೋಜನೆಯ ಮೂಲವನ್ನು ಸಬಲೀಕರಣ ಮಾಡಲು ಅನುಕೂಲವಾಗಲಿದೆ. ಇದು ನೀರಿನ ತೊಂದರೆ ನಿವಾರಣೆಗೆ ಸಹಕಾರಿ ಎಂದು ಹೇಳಿದರು. ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಸ್ಮಾರ್ಟ್ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಆಶಾದ್ ಆರ್.ಷರೀಪ್, ಮಹನಗರ ಪಾಲಿಕೆ ಮೇಯರ್ ಶೋಭಾ ಪಲ್ಲಗಟ್ಟಿ, ಆಯುಕ್ತ ಮಂಜುನಾಥ್, ಸದಸ್ಯರಾದ ದಿನೇಶ್ ಕೆ.ಶೆಟ್ಟಿ ಮತ್ತಿತರರಿದ್ದರು.