
ಮೈಸೂರು, ಜೂ.25- ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಕೆ.ಆರ್.ನಗರ ತಾಲ್ಲೂಕಿನ ಚಿಕ್ಕವಡ್ಡರಗುಡ್ಡಿ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಗಂದನಹಳ್ಳಿ ಗ್ರಾಮದ ಜಿ.ಆರ್.ಮಧು (38) ಹಾಗೂ ಪಾಂಡವಪುರ ತಾಲ್ಲೂಕಿನ ಹಾರೋಹಳ್ಳಿ ಪದ್ಮಮ್ಮ (42) ಎಂದು ತಿಳಿದು ಬಂದಿದೆ. ಇದೇ ಸಂದರ್ಭದಲ್ಲಿ ಮಂಜುಳಾ ಹಾಗೂ ಚಿನ್ನು ಎಂಬ ಮಗು ಗಂಭೀರವಾಗಿ ಗಾಯಗೊಂಡಿದ್ದು , ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ವಿವರ: ಮಧು ಅವರು ತಮ್ಮ ಪತ್ನಿ ಮಂಜುಳಾ ಅವರ ಜತೆ ಕೆ.ಆರ್.ಪೇಟೆ ತಾಲ್ಲೂಕಿನ ಗಂದವನಹಳ್ಳಿಯಲ್ಲಿ ದೇವಾಲಯಕ್ಕೆ ತೆರಳಿ ವಾಪಸ್ ಬರುವಾಗ ಹಾರೋಹಳ್ಳಿಯ ನಿವಾಸಿಗಳಾದ ರೇವಣ್ಣ ಮತ್ತವರ ಪತ್ನಿ ಪದ್ಮಮ್ಮ ಎದುರಾಗಿದ್ದಾರೆ.
ರಸ್ತೆ ಪಕ್ಕ ನಿಲ್ಲಿಸಿ ಮಾತನಾಡುವ ವೇಳೆ ವೇಗವಾಗಿ ಬಂದ ಬಸ್ ಎದುರಿಗೆ ಬರುತ್ತಿದ್ದ ವಾಹನವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕ ಸಾಗಿ ಮಧು ಅವರ ಬೈಕ್ಗೆ ಡಿಕ್ಕಿ ಹೊಡೆದಿದೆ.
ಕೆಳಗೆ ಬಿದ್ದ ಮಧು ಅವರ ಮೇಲೆ ಬಸ್ ಹರಿದಿದ್ದರೆ, ಪದ್ಮಮ್ಮ ಅವರು ಮುಂಭಾಗದಲ್ಲಿ ಬಿದ್ದು ಮೃತಪಟ್ಟಿದ್ದಾರೆ. ನೋಡು ನೋಡುತ್ತಿದ್ದಂತೆ ಈ ಘಟನೆ ನಡೆದಿದ್ದರಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.