ಮಂಗಳೂರು: ಸಮ್ಮಿಶ್ರ ಸರ್ಕಾರ ಹೊಸ ಬಜೆಟ್ ಮಂಡಿಸುತ್ತಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿರುವ ವಿಡಿಯೊ ವೈರಲ್ ಆಗಿದ್ದು ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ.
ಈ ವಿಡಿಯೊ ಕೆಲವು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿದೆ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಮುಖ್ಯಸ್ಥರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಧರ್ಮಸ್ಥಳದ ಶಾಂತಿನಿವಾಸದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದು ಅಲ್ಲಿ ತಮ್ಮನ್ನು ಭೇಟಿ ಮಾಡಲು ಬಂದ ಬೆಂಬಲಿಗರಲ್ಲಿ ಮಾತನಾಡುತ್ತಿರುವಾಗ ಇದು ಬಹುಮತ ಪಡೆದು ಅಧಿಕಾರಕ್ಕೆ ಬಂದ ಸರ್ಕಾರವಲ್ಲದಿರುವುದರಿಂದ ಹೊಸ ಬಜೆಟ್ ನ ಅವಶ್ಯಕತೆಯಿಲ್ಲ, ಹಿಂದಿನ ಕಾಂಗ್ರೆಸ್ ಸರ್ಕಾರದ ಬಜೆಟ್ ಮುಂದುವರಿಸಿದರೆ ಸಾಕು ಎಂದು ಹೇಳಿರುವುದು ಜೆಡಿಸ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯವನ್ನು ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ.
ಈ ವಿಡಿಯೊವನ್ನು ರೆಕಾರ್ಡ್ ಮಾಡಿಕೊಂಡು ಅದು ಸುದ್ದಿವಾಹಿನಿಗಳಿಗೆ ಸೋರಿಕೆಯಾಗಿರುವುದರಿಂದ ಸಿದ್ದರಾಮಯ್ಯನವರು ಆತಂಕಗೊಂಡಿದ್ದಾರೆ ಎಂದು ಮೂಲಗಳು ಹೇಳುತ್ತವೆ. ನಿನ್ನೆ ಅವರನ್ನು ಭೇಟಿ ಮಾಡಿದ್ದ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರಿಗೆ ಯಾರನ್ನು ಕೂಡ ತಮ್ಮನ್ನು ಭೇಟಿ ಮಾಡಲು ಬಿಡದಂತೆ ದಕ್ಷಿಣ ಕನ್ನಡ ಎಸ್ಪಿ ರವಿಕಾಂತೇಗೌಡ ಅವರಿಗೆ ಸೂಚಿಸುವಂತೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.