ಸಿದ್ದರಾಮಯ್ಯ ಘೋಷಿಸಿದ ಯೋಜನೆ ಬದಲಿಲ್ಲ: ಡಿಸಿಎಂ ಪರಮೇಶ್ವರ್‌

ಮಂಗಳೂರು: ”ಹಿಂದಿನ ರಾಜ್ಯ ಸರಕಾರದ ಕೊನೆಯ ಅವಧಿಯಲ್ಲಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಘೋಷಿಸಿರುವ ಯಾವುದೇ ಕಾರ್ಯಕ್ರಮವನ್ನು ಬದಲಾವಣೆ ಮಾಡುವುದಿಲ್ಲ. ಆ ಎಲ್ಲ ಯೋಜನೆಗಳು ಮುಂದುವರಿಯಲಿದೆ,” ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್‌ ತಿಳಿಸಿದ್ದಾರೆ.
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ”ಸಾಮಾನ್ಯವಾಗಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಾಗ ಹೊಸ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು ಸಾಮಾನ್ಯ. ಅದನ್ನು ಮುಂದಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಘೋಷಿಸಲಿದ್ದಾರೆ. ಹೊಸ ಘೋಷಣೆ ಆಗಲಿದೆಯೇ ವಿನಃ ಹಿಂದಿನ ಬಜೆಟ್‌ ಕಾರ್ಯಕ್ರಮಗಳನ್ನು ಬದಲಾಯಿಸುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
ಹೊಸದಾಗಿ ಬಜೆಟ್‌ ಮಂಡನೆ ಮಾಡುವುದರ ಬಗ್ಗೆ ಸಿದ್ದರಾಮಯ್ಯ ಅವರು ಬೇಸರಗೊಂಡಿದ್ದಾರಲ್ಲವೇ ಎಂದು ಕೇಳಲಾದ ಪ್ರಶ್ನೆಗೆ ”ನಮ್ಮದು ಮೈತ್ರಿ ಸರಕಾರ ಆಗಿರುವ ಕಾರಣ ನಮ್ಮ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಸಮನ್ವಯ ಸಮಿತಿ ರಚಿಸಿದ್ದೇವೆ. ಸಿದ್ದರಾಮಯ್ಯ ಅದರ ಅಧ್ಯಕ್ಷರು. ನಮ್ಮ ಬಜೆಟ್‌ ಹಾಗೂ ಇತರ ಅನೇಕ ವಿಚಾರಗಳ ಬಗ್ಗೆ ಅಲ್ಲಿ ಚರ್ಚೆ ನಡೆಸಿಯೇ ಒಪ್ಪಿಕೊಂಡಿದ್ದೇವೆ. ಹೀಗಿರುವಾಗ ಸಿದ್ದರಾಮಯ್ಯ ಬಜೆಟ್‌ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂಬ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸರಕಾರದ ಕಾರ್ಯಕ್ರಮಗಳ ಬಗ್ಗೆ ಮುಖ್ಯಮಂತ್ರಿ ಅಥವಾ ನಾನು ಏಕಪಕ್ಷೀಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ,” ಎಂದರು.
”ಸಿದ್ದರಾಮಯ್ಯ ಜತೆ ನಾನು ನಿತ್ಯ ಸಂಪರ್ಕದಲ್ಲಿದ್ದೇನೆ. ಬಜೆಟ್‌ ಬಗ್ಗೆ ಅವರು ಅಸಮಾಧಾನ ಹೊಂದಿರುವ ಬಗ್ಗೆ ನನ್ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ಭೇಟಿ ಸಂದರ್ಭ ನಿಗಮ ಮಂಡಳಿ, ಸಚಿವ ಸಂಪುಟ ಸೇರಿದಂತೆ ಕೆಲವು ವಿಚಾರಗಳ ಬಗ್ಗೆ ಸಹಜವಾಗಿಯೇ ಚರ್ಚೆಗಳು ನಡೆಯುತ್ತವೆ. ಇದು ಸಾಮಾನ್ಯ ಚರ್ಚೆ,” ಎಂದು ಹೇಳಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ