ಬೆಂಗಳೂರು, ಜೂ.23-ನನಗೆ ಶಿಕ್ಷಣದ ಕ್ಷೇತ್ರದಲ್ಲೂ ಅಪಾರ ಅನುಭವವಿದೆ. ಆದರೆ ರೈತರ ಜೊತೆ ಇರಬೇಕೆಂಬ ಕಾರಣಕ್ಕಾಗಿ ಖಾತೆ ಬದಲಾವಣೆಗೆ ಮನವಿ ಮಾಡಿದ್ದೆ. ಪಕ್ಷದ ವರಿಷ್ಠರಾದ ದೇವೇಗೌಡರು ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕು, ಅದಕ್ಕಾಗಿ ಒಳ್ಳೆಯ ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ, ಕೊನೆಗೆ ಖಾತೆ ಒಪ್ಪಿಕೊಂಡು ಕೆಲಸ ಆರಂಭಿಸಿದ್ದೇನೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಟಿ.ದೇವೇಗೌಡರು ಓದಿರುವುದು 8ನೇ ತರಗತಿ. ಉನ್ನತ ಶಿಕ್ಷಣ ಖಾತೆ ನಿಭಾಯಿಸುತ್ತಾರಾ ಎಂಬ ಬಗ್ಗೆ ಬಹಳ ಚರ್ಚೆಯಾಗಿದೆ. ನನಗೆ ಶಿಕ್ಷಣ ಇಲಾಖೆಯಲ್ಲಿ ಅನುಭವವಿದೆ. ಸರ್ಕಾರಿ ಶಾಲೆಗಳ ಸ್ಥಿತಿ ಬಗ್ಗೆ, ನಗರ ಪ್ರದೇಶಗಳ ಶಿಕ್ಷಣ ವ್ಯವಸ್ಥೆ ಬಗ್ಗೆ ಈ ಹಿಂದೆ ಹಲವಾರು ಮಾಹಿತಿ ಕೊಟ್ಟಿದ್ದೇನೆ. ಐಎಎಸ್ ಅಧಿಕಾರಿಗಳಿಗೂ ಸಲಹೆ ಕೊಟ್ಟಿದ್ದೇನೆ. ರೈತರ ಜೊತೆ ಇರಬೇಕೆಂಬ ಆಶಯದಿಂದ ಬೇರೆ ಖಾತೆ ಕೇಳಿದ್ದೆ. ಈಗ ಇದೇ ಖಾತೆಯಲ್ಲೇ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಉನ್ನತ ಶಿಕ್ಷಣ ಇಲಾಖೆಗೆ ಪೆÇ್ರ.ರಂಗಪ್ಪ ಅವರನ್ನು ಸಲಹೆಗಾರರನ್ನಾಗಿ ನೇಮಿಸುವ ಪ್ರಸ್ತಾವನೆಯೇ ಇಲ್ಲ. ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅದನ್ನು ಸ್ಪಷ್ಟಪಡಿಸಿದ್ದಾರೆ. ರಂಗಪ್ಪ ಸೇರಿದಂತೆ ಎಲ್ಲ ತಜ್ಞರ ಸಲಹೆಯನ್ನು ನಾನು ಪಡೆಯುತ್ತೇನೆ. ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೂ ಉನ್ನತ ಶಿಕ್ಷಣ ಸಿಗಬೇಕೆಂಬುದು ನನ್ನ ಆಸೆ. ಅದಕ್ಕಾಗಿ ಇಲಾಖೆ ಗುಣಮಟ್ಟವನ್ನು ಹೆಚ್ಚಿಸುತ್ತೇನೆ. ಶಿಕ್ಷಣ ಸುಧಾರಣೆಗಾಗಿ ಹಿರಿಯರ ಮಾರ್ಗದರ್ಶನ ಪಡೆದೇ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.
ಪೆÇ್ರ.ರಂಗಪ್ಪ ಅವರು ಮೇಧಾವಿ, ದೊಡ್ಡ ವಿಜ್ಞಾನಿ, ಶಿಕ್ಷಣ ತಜ್ಞರು. ಅವರ ಬಗ್ಗೆ ಅಪಾರ್ಥ ಕಲ್ಪಿಸುವಂತಹ ಸುದ್ದಿ ಮಾಡುತ್ತಿರುವುದು ತರವಲ್ಲ ಎಂದು ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ನೇತೃತ್ವದಲ್ಲಿ ನಿಯೋಗವೊಂದು ಜಿ.ಟಿ.ದೇವೇಗೌಡರನ್ನು ಭೇಟಿ ಮಾಡಿ ರಂಗಪ್ಪ ಅವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಬಾರದು ಮತ್ತು ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯ ಮಾಡಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ, ಪದೇ ಪದೇ ರಂಗಪ್ಪ ವಿಷಯ ಬೇಡ ಎಂದು ಸಲಹೆ ಮಾಡಿದರು.