ಕಾವೇರಿ ನಿರ್ವಹಣಾ ಮಂಡಳಿಗೆ ಸದಸ್ಯರ ನೇಮಕ: ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ

 

ಬೆಂಗಳೂರು,ಜೂ.23-ರಾಜ್ಯ ಸರ್ಕಾರದ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಯಾವುದನ್ನೂ ಲೆಕ್ಕಿಸದೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬಾರದು ಎಂದು ರಾಜ್ಯ ಸರ್ಕಾರ ಒತ್ತಾಯ ಮಾಡಿತ್ತು.
ಇತ್ತೀಚೆಗೆ ನವದೆಹಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಇದೇ ಬೇಡಿಕೆಯನ್ನು ಮುಂದಿಟ್ಟಿದ್ದರು.
ರಾಜ್ಯ ಸರ್ಕಾರದ ಅಭಿಪ್ರಾಯ ಪಡೆಯದೆ ನಿರ್ವಹಣಾ ಮಂಡಳಿ ರಚನೆ ಮಾಡುವುದು ಸರಿಯಲ್ಲ. ಇದರಲ್ಲಿರುವ ಲೋಪದೋಷಗಳನ್ನು ತಿದ್ದುಪಡಿ ನಂತರ ಸಂಸತ್‍ನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿ ಅಂಗೀಕರಿಸಬೇಕೆಂಬ ಮನವಿಯನ್ನು ಮಾಡಿಕೊಂಡಿದ್ದರು.

ಇದಕ್ಕೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಕರ್ನಾಟಕದ ಮನವಿಯನ್ನು ಪರಿಗಣಿಸುವ ಆಶ್ವಾಸನೆ ನೀಡಿತ್ತು. ಆದರೆ ನಿನ್ನೆ ಇದ್ದಕ್ಕಿದ್ದಂತೆ ಕರ್ನಾಟಕವನ್ನು ಹೊರತುಪಡಿಸಿ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರನ್ನು ನೇಮಕ ಮಾಡಿ ಅಧಿಸೂಚನೆ ಹೊರಡಿಸಿರುವುದು ಕರ್ನಾಟಕದ ವಿರೋಧಕ್ಕೆ ಕಾರಣವಾಗಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ ಅಧ್ಯಕ್ಷರಾಗಿ ಕೇಂದ್ರ ಜಲ ಆಯೋಗದ ಇಂಜಿನಿಯರ್ ನವೀನ್‍ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಉಳಿದಂತೆ ಕೇರಳ, ತಮಿಳುನಾಡು, ಪುದುಚೇರಿಯ ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್‍ಗಳು, ಹವಾಮಾನ ಇಲಾಖೆಯ ವಿಜ್ಞಾನಿ ಡಾ.ಎ.ಮಹಪಾತ್ರ, ಕೇಂದ್ರ ಜಲ ಆಯೋಗದ ಕೊಯಮತ್ತೂರು ಸಿ ಅಂಡ್ ಎಸ್‍ಆರ್‍ಒ ಮುಖ್ಯ ಇಂಜಿನಿಯರ್ ಎಂ.ಎನ್.ಕೃಷ್ಣನುಣ್ಣಿ , ಕೇಂದ್ರ ಸರ್ಕಾರದ ತೋಟಗಾರಿಕೆ ಆಯುಕ್ತರು ಹಾಗೂ ಕೇಂದ್ರ ಜಲ ಆಯೋಗದ ಮುಖ್ಯ ಇಂಜಿನಿಯರ್ ಎ.ಎಸ್.ಗೋಯಲ್, ನಿಯಂತ್ರಣ ಸಮಿತಿಯ ಸದಸ್ಯರಾಗಿದ್ದಾರೆ. ಒಟ್ಟು 8 ಮಂದಿ ಸಮಿತಿಯಲ್ಲಿದ್ದಾರೆ. ಆದರೆ ಕನ್ನಡಿಗರಿಗೆ ಅವಕಾಶ ಲಭಿಸಿಲ್ಲ.

ಸಮಿತಿಯ ಕೆಲಸವೇನು:
ಪ್ರಸ್ತುತ ಕೇಂದ್ರ ಸರ್ಕಾರ ರಚನೆ ಮಾಡಿರುವ ಸಮಿತಿಯು ಬೆಂಗಳೂರಿನಲ್ಲೇ ಕಾರ್ಯ ನಿರ್ವಹಿಸಲಿದೆ. ಪ್ರತಿ 10 ದಿನಕ್ಕೊಮ್ಮೆ ಸಭೆ ಸೇರಲಿರುವ ಈ ಸಮಿತಿಯು ಕಾವೇರಿ ಜಲಾನಯನ ತೀರಾ ಪ್ರದೇಶಗಳಾದ ಹಾರಂಗಿ, ಕಬಿನಿ, ಹೇಮಾವತಿ ಮತ್ತು ಕೆಆರ್‍ಎಸ್ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಸಾಮಥ್ರ್ಯ ಯಾವ ರಾಜ್ಯಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕು ಎಂಬುದನ್ನು ಲೆಕ್ಕಾಚಾರ ಹಾಕುತ್ತದೆ.
ಎಂಟು ಮಂದಿ ಸದಸ್ಯರಲ್ಲಿ ಸಭೆ ಸೇರಬೇಕಾದರೆ ಕೋರಂ ಸಂಖ್ಯೆಯಾಗಿ ಆರು ಮಂದಿ ಇರಬೇಕು. ಒಂದು ವೇಳೆ ಯಾರಾದರೂ ಗೈರು ಹಾಜರಾದರೆ ಸಭೆಯನ್ನು ಮುಂದೂಡಬೇಕಾಗತ್ತದೆ.

ಕರ್ನಾಟಕದ ವಾದವೇನು:
ಕೇಂದ್ರ ಸರ್ಕಾರದ ಉದ್ದೇಶಿತ ನೀರು ನಿರ್ವಹಣಾ ಮಂಡಳಿ ರಚನೆಗೆ ಕರ್ನಾಟಕ ಪ್ರಾರಂಭದಿಂದಲೇ ಅಪಸ್ವರ ತೆಗೆದಿದೆ. ಸಮಿತಿಯು ಎಲ್ಲವನ್ನು ನಿರ್ಧರಿಸುವುದಾದರೆ ರಾಜ್ಯ ಸರ್ಕಾರದ ಪಾತ್ರವೇನು ಎಂಬ ಮೂಲ ಪ್ರಶ್ನೆಯನ್ನು ಮುಂದಿಟ್ಟಿದೆ.
ನಮ್ಮ ಭಾಗದ ರೈತರು ಯಾವ ಬೆಳೆಯನ್ನು ಬೆಳೆಯಬೇಕು, ದೈನಂದಿನ ನೀರಿನ ಮಟ್ಟ, ಒಳಹರಿವು, ಹೊರಹರಿವು, ಆಯಾ ಪ್ರದೇಶಗಳಲ್ಲಿ ಬೀಳುವ ಮಳೆಯ ಪ್ರಮಾಣ, ಪ್ರಾಧಿಕಾರ ನೀಡಿದ ಆದೇಶಗಳ ಪಾಲನೆಯನ್ನು ಮಾಡುವುದು ಕಷ್ಟಕರ ಎಂಬುದು ಕರ್ನಾಟಕದ ವಾದವಾಗಿದೆ.

ಪ್ರತಿ 10 ದಿನಗಳಿಗೊಮ್ಮೆ ಸಭೆ ಸೇರಿ ಸಮಿತಿಯು ಪ್ರಾಧಿಕಾರಕ್ಕೆ ಇಲ್ಲಿನ ಜಲಾಶಯಗಳ ಸ್ಥಿತಿಗತಿ ಹಾಗೂ ರೈತರ ಬೆಳೆಗಳಿಗೆ ಅಗತ್ಯವಿರುವ ನೀರಿನ ಪ್ರಮಾಣದ ಬಗ್ಗೆ ಶಿಫಾರಸ್ಸು ಮಾಡುತ್ತದೆ.
ಈ ಶಿಫಾರಸ್ಸಿನನ್ವಯ ಯಾರಿಗೆ ಎಷ್ಟು ಭಾಗದಲ್ಲಿ ನೀರು ಹರಿಸಬೇಕೆಂಬುದನ್ನು ಪ್ರಾಧಿಕಾರ ತೀರ್ಮಾನಿಸುತ್ತದೆ. ಸಂಕಷ್ಟ ಸೂತ್ರದ ನಿಯಮದ ಪ್ರಕಾರ ನೀರು ಹರಿಸಬಹುದೇ ಹೊರತು ನಮ್ಮ ಭಾಗದ ರೈತರು ಕಷ್ಟದಲ್ಲಿರುವಾಗ ನೆರೆಯ ರಾಜ್ಯಗಳಿಗೆ ನೀರು ಬಿಡಲು ಸೂಚಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ತಗಾದೆಯನ್ನು ರಾಜ್ಯ ಸರ್ಕಾರ ತೆಗೆದಿದೆ.
ಈಗ ಯಾವುದನ್ನು ಪರಿಗಣಿಸಿದೆ ಏಕಪಕ್ಷೀಯವಾಗಿ ಕೇಂದ್ರ ಸರ್ಕಾರ ನಿಯಂತ್ರಣ ಮಂಡಳಿಯನ್ನು ರಚನೆ ಮಾಡಿ ಅಧ್ಯಕ್ಷರು ಮತ್ತು ಸದಸ್ಯರನ್ನುರಚನೆ ಮಾಡಿರುವುದು ಕರ್ನಾಟಕದ ವಿರೋಧಕ್ಕೆ ಕಾರಣವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ