ಬೆಂಗಳೂರು, ಜೂ.23- ಅಂತೂ ಇಂತೂ ಕೊನೆಗೂ ರಾಜ್ಯ ಸರ್ಕಾರಿ ನೌಕರರಿಗೆ ಆರನೆ ವೇತನ ಆಯೋಗದ ಶಿಫಾರಸಿನಂತೆ ಶೇ.30ರಷ್ಟು ವೇತನ ಹೆಚ್ಚಳವನ್ನು ಜಾರಿ ಮಾಡಿದ್ದು, ಜುಲೈ ತಿಂಗಳಿನಲ್ಲಿ ಸರ್ಕಾರಿ ನೌಕರರಿಗೆ ಪರಿಷ್ಕøತ ವೇತನ ಕೈ ಸೇರುತ್ತಿದೆ.
ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ಅವರು ಸಲ್ಲಿಸಿದ್ದ ಆರನೆ ವೇತನ ಆಯೋಗದ ಶಿಫಾರಸಿನಲ್ಲಿ ಸರ್ಕಾರಿ ನೌಕರರಿಗೆ ಶೇ.30ರಷ್ಟು ಮೂಲ ವೇತನ ಹಾಗೂ ಶೇ.13ರಷ್ಟು ತುಟ್ಟಿಭತ್ಯೆ ಸೇರಿ ಶೇ.43ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಿದ್ದರು.
ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿಯನ್ನು ಯಥಾವತ್ತು ಜಾರಿಮಾಡುವುದಾಗಿ ಘೋಷಿಸಿದ್ದರು. ಆದರೆ, ಸಿದ್ದರಾಮಯ್ಯ ಮಂಡಿಸಿದ ಬಜೆಟ್‍ನಲ್ಲಿ ವೇತನ ಪರಿಷ್ಕರಣೆ ಬಗ್ಗೆ ಸ್ಪಷ್ಟವಾದ ನಿರ್ಧಾರ ಪ್ರಕಟಿಸಿರಲಿಲ್ಲ. ಆರನೆ ವೇತನ ಆಯೋಗದ ಶಿಫಾರಸು ಜಾರಿಗೆ ತರಬೇಕಾದರೆ ಸುಮಾರು 10,500 ಕೋಟಿ ರೂ.ಗಳ ಅನುದಾನದ ಅಗತ್ಯವಿದೆ. 5.20 ಲಕ್ಷ ಸರ್ಕಾರಿ ನೌಕರರಿಗೆ ಮತ್ತು 73 ಸಾವಿರ ಅನುದಾನಿತ ಸಂಸ್ಥೆಗಳ ಸಿಬ್ಬಂದಿಗಳಿಗೆ ಲಾಭವಾಗುತ್ತದೆ ಎಂದು ತಿಳಿಸಿದರು.
ಆದರೆ, ಬಜೆಟ್‍ನಲ್ಲಿ ಅಗತ್ಯವಾದ ಅನುದಾನ ನಿಗದಿ ಮಾಡಿರಲಿಲ್ಲ. ನಂತರದ ದಿನಗಳಲ್ಲಿ ವೇತನ ಆಯೋಗವನ್ನು ಜಾರಿ ಮಾಡುತ್ತೇವೆ ಎಂದು ಮೌಖಿಕವಾಗಿ ಭರವಸೆ ನೀಡಿದ್ದರು. ರಾಜ್ಯ ಸರ್ಕಾರಿ ನೌಕರರ ಒತ್ತಡ ಹೆಚ್ಚಾದಾಗ ಸಂಪುಟದಲ್ಲೂ ಆ ಬಗ್ಗೆ ಚರ್ಚೆ ಮಾಡಿ ವರದಿಯನ್ನು ಅಂಗೀಕಾರ ಮಾಡಲಾಯಿತು ಮತ್ತು ಹಣಕಾಸು ಇಲಾಖೆಯ ಅನುಮತಿಯನ್ನೂ ಪಡೆಯಲಾಗಿದೆ.
ಆದರೆ, ಬದಲಾದ ಪರಿಸ್ಥಿತಿಯಲ್ಲಿ ಶೇ.43ರ ಬದಲಿಗೆ ಶೇ.30ರಷ್ಟು ಮಾತ್ರ ವೇತನ ಪರಿಷ್ಕರಣೆ ಮಾಡಲಾಗುತ್ತಿದೆ. ಮೂಲ ವೇತನ ಮತ್ತು ತುಟ್ಟಿಭತ್ಯೆ ಎರಡೂ ಸೇರಿ ಶೇ.30ರಷ್ಟು ವೇತನ ಪರಿಷ್ಕರಣೆಯಾಗಲಿದೆ ಎಂದು ಸರ್ಕಾರಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಮನೆ ಬಾಡಿಗೆ, ನಗರ ಭತ್ಯೆಗಳನ್ನು ಪರಿಷ್ಕರಿಸಲಾಗಿದೆ.
ಪರಿಷ್ಕøತ ವೇತನ ಏಪ್ರಿಲ್1ರಿಂದ ಪೂರ್ವಾನ್ವಯವಾಗುತ್ತಿದೆ. ಏಪ್ರಿಲ್-ಮೇ ತಿಂಗಳ ಪರಿಷ್ಕøತ ವೇತನ ಬಾಕಿಯನ್ನು ನಗದು ರೂಪದಲ್ಲಿ ಪಾವತಿಸಲಾಗುತ್ತಿದ್ದು, ಜೂನ್ ತಿಂಗಳ ವೇತನವನ್ನು ಎಚ್‍ಆರ್‍ಎಂಎಸ್‍ನಲ್ಲಿ ಅಳವಡಿಸಿ ಜುಲೈನಲ್ಲಿ ಸರ್ಕಾರಿ ನೌಕರರಿಗೆ ಪಾವತಿಸಲಾಗುತ್ತಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಆರನೆ ವೇತನ ಆಯೋಗ ಜನವರಿ ಅಂತ್ಯದಲ್ಲಿ ಸರ್ಕಾರಕ್ಕೆ ಪ್ರಥಮ ವರದಿ ಸಲ್ಲಿಸಿತ್ತು. ಅದು ಜಾರಿಗೊಳ್ಳಲಿದೆ ಎಂದು ಹೇಳಲಾಗಿತ್ತಾದರೂ ಚುನಾವಣೆ ಕಾರಣದಿಂದ ವಿಳಂಬವಾಯಿತು. ಮೇ ತಿಂಗಳಿನಲ್ಲೇ ಪರಿಷ್ಕøತ ವೇತನವನ್ನು ಸರ್ಕಾರಿ ನೌಕರರ ಖಾತೆಗೆ ತಲುಪಿಸಲಾಗುತ್ತದೆ ಎಂದು ಹೇಳಲಾಗಿತ್ತಾದರೂ ಚುನಾವಣಾ ಆಯೋಗದ ಅನುಮತಿ ಅಗತ್ಯ ಎಂದು ವಿಳಂಬ ಮಾಡಲಾಯಿತು. ಚುನಾವಣಾ ಆಯೋಗವೂ ಅನುಮತಿ ನೀಡಿತ್ತು. ಆದರೂ ಪರಿಷ್ಕøತ ವೇತನ ಸರ್ಕಾರಿ ನೌಕರರ ಕೈ ಸೇರಿರಲಿಲ್ಲ.
ಈಗ ಜುಲೈ ತಿಂಗಳಿನಲ್ಲಿ ಹೆಚ್ಚುವರಿ ವೇತನ ಕೈ ಸೇರಲಿದೆ ಎಂದು ಹಲವಾರು ಆದೇಶಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಮೊದಲೂ ಈ ರೀತಿ ಹಲವಾರು ಆದೇಶಗಳು ಜಾರಿಯಾಗಿದ್ದರೂ ಅಂತಿಮವಾಗಿ ಫಲಾನುಭವಿಗಳಿಗೆ ಹಣ ತಲುಪಿರಲಿಲ್ಲ. ಆದರೆ, ಈ ತಿಂಗಳು ಆ ರೀತಿ ಆಗುವುದಿಲ್ಲ. ಖಚಿತವಾಗಿ ವೇತನ ಸಿಕ್ಕೇ ಸಿಗಲಿದೆ ಎಂಬ ನಿರೀಕ್ಷೆಗಳನ್ನು ಸರ್ಕಾರಿ ನೌಕರರು ಇಟ್ಟುಕೊಂಡಿದ್ದಾರೆ.
ಮೈತ್ರಿ ಸರ್ಕಾರ ಸರ್ಕಾರಿ ನೌಕರರ ನಿರೀಕ್ಷೆಗಳನ್ನು ಈಡೇರಿಸಲಿದೆಯೋ ಅಥವಾ ನಿರಾಸೆ ಮಾಡಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.