ದೋಸ್ತಿ ಸರ್ಕಾರದಿಂದ ಸೀರೆ ಭಾಗ್ಯ ಯೋಜನೆ

 

ಬೆಂಗಳೂರು,ಜೂ.23-ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಲವು ಭಾಗ್ಯಗಳನ್ನು ಜಾರಿ ಮಾಡಿ ಜನರನ್ನು ಓಲೈಸಿದ್ದ ಮಾದರಿಯಲ್ಲೇ ಈಗ ದೋಸ್ತಿ ಸರ್ಕಾರ ಮಹಿಳೆಯರ ಮನಗೆಲ್ಲಲು ಸೀರೆ ಭಾಗ್ಯ ಯೋಜನೆಯನ್ನು ಜಾರಿ ಮಾಡಲು ತೀರ್ಮಾನಿಸಿದೆ.
ಈ ಪ್ರಕಾರ ಕೆಲವು ವಿಶೇಷ ಸಂದರ್ಭಗಳಲ್ಲಿ ಮಹಿಳೆಯರಿಗೆ ರಿಯಾಯ್ತಿ ದರದಲ್ಲಿ ಸೀರೆಯನ್ನು ವಿತರಣೆ ಮಾಡುವುದು ಸರ್ಕಾರದ ಉದ್ದೇಶ.
ಮುಂಬರುವ ವರಮಹಾಲಕ್ಷ್ಮಿ ಹಬ್ಬದ ದಿನದಂದು ವಿಶ್ವವಿಖ್ಯಾತ ಮೈಸೂರು ರೇಷ್ಮೆ ಸೀರೆಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ಸರ್ಕಾರ ಮುಂದಾಗಿದೆ.

ಈ ಮೂಲಕ ಮೈಸೂರು ರೇಷ್ಮೆ ಸೀರೆಯ ವ್ಯಾಪಾರ ವಹಿವಾಟನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕೊಂಡೊಯ್ಯುವುದು ಒಂದು ಉದ್ದೇಶವಾದರೆ, ಕಡಿಮೆ ದರದಲ್ಲಿರುವ ಸೀರೆಯನ್ನು ಪ್ರತಿಯೊಬ್ಬ ಜನಸಾಮಾನ್ಯರು ತೆಗೆದುಕೊಳ್ಳಬೇಕೆಂಬ ಸದುದ್ದೇಶವು ಇದರಲ್ಲಿ ಅಡಗಿದೆ.
ವರಮಹಾಲಕ್ಷ್ಮಿ ಹಬ್ಬದ ದಿನದಂದು 10 ಸಾವಿರ ಬೆಲೆಯ ರೇಷ್ಮೆ ಸೀರೆಯನ್ನು ಕೇವಲ 4,500 ರೂ. ದರದಲ್ಲಿ ಮಾರಾಟ ಮಾಡಲು ಪ್ರವಾಸೋದ್ಯಮ ಇಲಾಖೆ ಮುಂದೆ ಬಂದಿದೆ.
ಸಾಮಾನ್ಯವಾಗಿ ವರಮಹಾಲಕ್ಷ್ಮಿ ಹಬ್ಬದ ದಿನದಂದು ಮಹಿಳೆಯರು ಚಿನ್ನ, ಬಟ್ಟೆ ಸೇರಿದಂತೆ ಮತ್ತಿತರ ಅಗತ್ಯ ವಸ್ತುಗಳನ್ನು ಖರೀದಿ ಮಾಡುವುದು ಸರ್ವೇ ಸಾಮಾನ್ಯ. ಅಂದು ಖರೀದಿ ಮಾಡಿದರೆ ಮನೆಗೆ ಒಳಿತಾಗುತ್ತದೆ ಎಂಬ ಕಲ್ಪನೆ ಎಲ್ಲರಲ್ಲಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ವರಮಹಾಲಕ್ಷ್ಮಿ ದಿನದಂದು ಮೈಸೂರು ರೇಷ್ಮೆ ಸೀರೆಯನ್ನು ರಿಯಾಯ್ತಿ ದರದಲ್ಲಿ ಮಾರಾಟ ಮಾಡಲು ತೀರ್ಮಾನಿಸಿದೆ.

ವಿಶೇಷ ದಿನಗಳಲ್ಲಿ ರಿಯಾಯ್ತಿ ದರ:
ಇನ್ನು ಮುಂದೆ ಹಬ್ಬ ಹರಿದಿನಗಳಲ್ಲಿ ಈ ರೀತಿ ದುಬಾರಿ ಬೆಲೆಯ ಸೀರೆಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ.
ವರಮಹಾಲಕ್ಷ್ಮಿ ಹಬ್ಬದ ಜೊತೆ ಗೌರಿ-ಗಣೇಶ, ದೀಪಾವಳಿ, ಯುಗಾದಿ, ದಸರಾ ಸೇರಿದಂತೆ ಪ್ರಮುಖ ಸಂದರ್ಭಗಳಲ್ಲಿ ಮಾರಾಟ ಮಾಡುವ ಉದ್ದೇಶವನ್ನು ಇಟ್ಟುಕೊಂಡಿದೆ.
ಮೈಸೂರು ರೇಷ್ಮೆ ಸೀರೆ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಸಿಗುವುದಿಲ್ಲ ಎಂಬ ಮನೋಭಾವನೆ ಇದೆ. ಅಲ್ಲದೆ ಜೀವನದಲ್ಲಿ ಒಂದು ಬಾರಿಯಾದರೂ ಇದನ್ನು ಧರಿಸಬೇಕೆಂಬ ಆಸೆ ಮಹಿಳೆಯರಲ್ಲಿ ಇದ್ದೇ ಇರುತ್ತದೆ.
ಇದೆಲ್ಲವನ್ನೂ ಪರಿಗಣಿಸಿಯೇ ಸರ್ಕಾರ ವಿಶೇಷವಾಗಿ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ಮಾರಾಟ ಮಾಡಲು ಮುಂದೆ ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ