ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಘರ್ ನಾಮಕರಣ: ಪ್ರಸ್ತಾವನೆ ಬಗ್ಗೆ ಚರ್ಚಿಸಿ ತೀರ್ಮಾನ: ಸಚಿವ ಜಮೀರ್ ಅಹಮ್ಮದ್ ಖಾನ್

 

ಬೆಂಗಳೂರು, ಜೂ.22-ನಗರದ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಘರ್ ಎಂದು ನಾಮಕರಣ ಮಾಡುವ ಸಂಬಂಧ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ಪಕ್ಷದ ಹಿರಿಯರೊಂದಿಗೆ ಚರ್ಚಿಸಿ ಸಲಹೆ ಪಡೆದು ತೀರ್ಮಾನ ಕೈಗೊಳ್ಳುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಜ್ ಭವನ ಒಂದು ಸ್ವಾಯತ್ತ ಸಂಸ್ಥೆ ಇದಕ್ಕೆ ಟಿಪ್ಪುಸುಲ್ತಾನ್ ಘರ್ ಎಂಬ ಹೆಸರಿಡಲು ಮುಸ್ಲಿಂ ಸಮುದಾಯದ ಮುಖಂಡರು ಸಲಹೆ ಮಾಡಿದ್ದಾರೆ.
ಈ ಬಗ್ಗೆ ಪಕ್ಷದ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್ ಅವರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇನೆ ಎಂದರು.
ಈ ಬಗ್ಗೆ ಬಿಜೆಪಿ ವಿರೋಧಿಸುವುದಿಲ್ಲ ಎಂಬ ವಿಶ್ವಾಸವಿದೆ. ಟಿಪ್ಪು ಜಯಂತಿ ಆಚರಣೆ ವಿಚಾರವೇ ಬೇರೆ, ಈ ವಿಚಾರವೇ ಬೇರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇಂತಹ ವಿಚಾರಗಳಲ್ಲಿ ನಾನೊಬ್ಬನೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಎಲ್ಲರೊಂದಿಗೆ ಚರ್ಚಿಸಿ ಮುಂದುವರೆಯುತ್ತೇನೆ. ನಾನು ನಾಯಕನಾಗಲು ಬಂದಿಲ್ಲ ಅಥವಾ ಯಾರನ್ನೂ ಓವರ್‍ಟೇಕ್ ಮಾಡಲೂ ಬಂದಿಲ್ಲ. ಸಮಾಜ ಸೇವಕನಾಗಿ ಕಾರ್ಯನಿರ್ವಹಿಸಲು ಬಂದಿದ್ದೇನೆ ಎಂದು ಹೇಳಿದರು.
ಲೀಡರ್ ಆಗಬೇಕೆಂಬುದನ್ನು ಜನರು ಹಾಗೂ ದೇವರು ನಿರ್ಧರಿಸುತ್ತಾರೆ. ಅವರ ಕೈಯಲ್ಲೇ ಲಗಾಮು ಇದೆ. ಕಳೆದ ಹಜ್ ಯಾತ್ರೆ ಸಂದರ್ಭದಲ್ಲೇ ಹಜ್ ಭವನ ನೂತನ ಹೆಸರು ನಾಮಕರಣ ವಿಚಾರ ಪ್ರಸ್ತಾಪವಾಗಿತ್ತು.
ಸಭೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದೇನೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ