ಜಮ್ಮು ಮತ್ತು ಕಾಶ್ಮೀರ: ಉಗ್ರರ ಮಟ್ಟಹಾಕಲು ಎನ್ ಎಸ್ ಜಿ ಮತ್ತು ಸ್ನೈಪರ್ ಪಡೆಗಳ ರವಾನೆ

ನವದೆಹಲಿ:ಜೂ-22: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಮುಂದುವರಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕಣಿವೆ ರಾಜ್ಯಕ್ಕೆ ಎನ್ ಎಸ್ ಜಿ ಮತ್ತು ಸ್ನೈಪರ್ ಪಡೆಗಳನ್ನು ರವಾನೆ ಮಾಡಿದೆ.

ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಎನ್ ಎಸ್ ಜಿ ಕಮಾಂಡೋ ಪಡೆ, ಸ್ನೈಪರ್ ಪಡೆಗಳನ್ನು ರವಾನೆ ಮಾಡಿದ್ದು, ಇದಲ್ಲದೇ ಅತ್ಯಾಧುನಿಕ ರಾಡಾರ್ ಗಳನ್ನು ರವಾನೆ ಮಾಡಿದೆ ಎಂದು ತಿಳಿದುಬಂದಿದೆ.

ಶ್ರೀನಗರದಲ್ಲಿರುವ ಗಡಿ ಭದ್ರತಾ ಪಡೆ (ಬಿ.ಎಸ್‌.ಎಫ್.) ಕ್ಯಾಂಪ್‌ ಕಚೇರಿ ಹುಮಾಹಾದಲ್ಲಿ ಎನ್‌ಎಸ್‌ಜಿ ಕಮಾಂಡೋ ಪಡೆಗೆ ಬಿರುಸಿನಿಂದ ತರಬೇತಿ ನೀಡಲಾಗುತ್ತಿದೆ. ಕೇಂದ್ರ ಗೃಹ ಖಾತೆ ಮೂಲಗಳ ಪ್ರಕಾರ 2 ವಾರಗಳ ಹಿಂದೆಯೇ ಎನ್‌ಎಸ್‌ಜಿಯ ಹೌಸ್‌ ಇಂಟರ್‌ವೆನ್ಶನ್‌ ಟೀಮ್‌ (ಎಚ್‌.ಐ.ಟಿ.) ಕೂಡ ಕಣಿವೆ ರಾಜ್ಯಕ್ಕೆ ತೆರಳಿದೆ. ಇದರ ಜತೆಗೆ ಶೀಘ್ರದಲ್ಲಿಯೇ ಎನ್‌ಎಸ್‌ಜಿಯ 100 ಸದಸ್ಯರು ಕಣಿವೆ ರಾಜ್ಯಕ್ಕೆ ತೆರಳಲಿದ್ದಾರೆ. ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ವಿವಿಧ ಭದ್ರತಾ ಪಡೆಗಳಲ್ಲಿ ಉಂಟಾಗಬಹುದಾದ ಸಾವು-ನೋವು ತಡೆಯಲು ನೆರವಾಗಲಿದೆ ಎನ್ನಲಾಗುತ್ತಿದೆ.

ಎಂಪಿ 5 ಗನ್‌ಗಳು, ಸ್ನೈಪರ್‌ ರೈಫಲ್‌ಗಳು, ವಿಶೇಷ ರಾಡಾರ್‌ಗಳು ಹಾಗು ಸಿ 4 ಸ್ಫೋಟಕಗಳನ್ನು ಬಳಸುವ ಮೂಲಕ ಅವಿತುಕೊಂಡಿರುವ ಭಯೋತ್ಪಾದಕರ ಮಟ್ಟ ಹಾಕುವಲ್ಲಿಎನ್‌ಎಸ್‌ಜಿ ವಿಶೇಷತೆ ಹೊಂದಿದೆ.

ಎನ್‌.ಎಸ್‌.ಜಿ. ಕಮಾಂಡೋಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸುವ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಒಂದು ತಿಂಗಳ ಹಿಂದೆಯೇ ಅನುಮೋದನೆ ನೀಡಿತ್ತು ಎಂದು ತಿಳಿದುಬಂದಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮನೆ, ಸರಕಾರಿ ಕಟ್ಟಡಗಳಿಗೆ ನುಗ್ಗಿದಾಗ ಅವರನ್ನು ಹೊರ ಹಾಕಿ ಗುಂಡಿಟ್ಟು ಕೊಲ್ಲುವುದು ಸಿಆರ್‌ಪಿಎಫ್ ಸಹಿತ ಭದ್ರತಾ ಪಡೆಗಳಿಗೆ ದೊಡ್ಡ ಸವಾಲು. ಇಂಥಹ ಸಂದರ್ಭದಲ್ಲಿ ಸೇನಾ ಸಿಬ್ಬಂದಿಯ ಪ್ರಾಣ ನಷ್ಟವಾಗುವುದನ್ನು ತಪ್ಪಿಸಲು ಕಟ್ಟಡದೊಳಕ್ಕೆ ನುಗ್ಗುವುದನ್ನು ತಡೆಯಲಾಗುತ್ತದೆ. ಈ ರೀತಿಯ ಸನ್ನಿವೇಶಗಳಲ್ಲಿ ಎನ್‌ಎಸ್‌ಜಿ ನೆರವಿಗೆ ಬರಲಿದ್ದು, ಸೈನಿಕರ ಪ್ರಾಣಹಾನಿಇಲ್ಲದೇ ಉಗ್ರರನ್ನು ಮಟ್ಟಹಾಕುವ ಕಲೆ ಎನ್ ಎಸ್ ಜಿ ಕರಗತವಾಗಿದೆ.

Snipers, Radars, NSG Commandos, Reach Kashmir, For Anti-Terror Ops

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ