ಮಲಯಾಳಂ ನ ಗೃಹಲಕ್ಷ್ಮಿ ಮುಖಪುಟದಲ್ಲಿನ ಮಗುವಿಗೆ ಹಾಲುಣಿಸುತ್ತಿರುವ ಚಿತ್ರ ಅಶ್ಲೀಲ ಅಲ್ಲ: ಕೇರಳ ಹೈಕೋರ್ಟ್

ಕೊಚ್ಚಿ:ಜೂ-22: ಸ್ತನ್ಯಪಾನದ ಕುರಿತ ಮನೋಭಾವ ಬದಲಾಯಿಸುವ ನಿಟ್ಟಿನಲ್ಲಿ ಮಲಯಾಳಂ ನಿಯತಕಾಲಿಕ ಗೃಹಲಕ್ಷ್ಮಿ ಮುಖಪುಟದಲ್ಲಿ ಪ್ರಕಟಿಸಿದ ಚಿತ್ರ ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಕೇರಳ ಹೈಕೋರ್ಟ್, ಗೃಹಲಕ್ಷ್ಮಿ ಮುಖಪುಟದಲ್ಲಿ ಮಹಿಳೆ ಮಗುವಿಗೆ ಹಾಲುಣಿಸುತ್ತಿರುವ ಚಿತ್ರ ಅಶ್ಲೀಲ ಅಲ್ಲ. ಈ ಚಿತ್ರದಲ್ಲಿ ಮಹಿಳೆಯನ್ನು ಅಶ್ಲೀಲ ರೀತಿಯಲ್ಲಿ ಚಿತ್ರೀಕರಿಸಲಾಗಿದ್ದಂತೆ ಕಾಣುತ್ತಿಲ್ಲ ಎಂದು ಹೇಳಿದೆ.

ಈ ಬಗ್ಗೆ ವಿವರ ನೀಡಿರುವ ಕೇರಳ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಾಧೀಶರುಗಳಾದ ಆಂಟನಿ ಡೊಮಿನಿಕ್ ಮತ್ತು ದಾಮಾ ಶೇಷಾದ್ರಿ ನಾಯ್ಡು, ಒಬ್ಬ ಮನುಷ್ಯನಿಗೆ ಅಶ್ಲೀಲವಾಗಿ ಕಾಣುತ್ತಿರುವುದು ಇನ್ನೊಬ್ಬರಿಗೆ ಕಲಾರೂಪದಂತೆ ಕಾಣುತ್ತದೆ. ಆ ಚಿತ್ರದ ತಲೆಬರಹವೂ ಅಶ್ಲೀಲವಾಗಿಲ್ಲ. ರಾಜಾ ರವಿವರ್ಮ ಅವರ ಚಿತ್ರವನ್ನು ನೋಡುವ ಅದೇ ದೃಷ್ಟಿಯಿಂದ ನಾವು ಈ ಚಿತ್ರವನ್ನು ನೋಡಿದ್ದೇವೆ. ಸೌಂದರ್ಯ ನೋಡುವವರ ಕಣ್ಣಿನಲ್ಲಿ ಎಂಬಂತೆ ಅಶ್ಲೀಲತೆಯೂ ಅದನ್ನು ನೋಡುವವರಿಗೆ ಸಂಬಂಧಿಸಿದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ತನ್ಯಪಾನದ ಕುರಿತ ಮನೋಭಾವ ಬದಲಾಯಿಸುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಮುಖಪುಟದಲ್ಲಿ ಪ್ರಕಟಿಸಿದ ಚಿತ್ರ ವಿವಾದಕ್ಕೆ ಕಾರಣವಾಗಿತ್ತು.ನಿಯತಕಾಲಿಕದ ಮುಖಪುಟದಲ್ಲಿ ಮಗುವಿಗೆ ಹಾಲುಣಿಸುತ್ತಿರುವ ಚಿತ್ರ ಪ್ರಕಟಿಸುವ ಮೂಲಕ ಮಾತೃಭೂಮಿ ಮಾಧ್ಯಮ ಸಂಸ್ಥೆ ಪೋಸ್ಕೊ ಕಾಯ್ದೆ ಉಲ್ಲಂಘಿಸಿದೆ ಎಂದು ಫೆಲಿಕ್ಸ್. ಎಂ.ಎ ಹೈಕೋರ್ಟ್‍ ಮೆಟ್ಟಿಲೇರಿದ್ದರು.

ಈ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಕಲಾವಿದರು ಮನುಷ್ಯನ ದೇಹವನ್ನು ಕಲಾರೂಪದಂತೆ ನೋಡಿದ್ದಾರೆ. ಅಜಂತಾದಲ್ಲಿಯೂ ಕಾಮಸೂತ್ರದಲ್ಲಿಯೂ ಕಂಡುಬರುವ ಕಲಾರೂಪಗಳು ಇದಕ್ಕೆ ಉದಾಹರಣೆಯಾಗಿದ್ದು, ಇದು ಭಾರತೀಯರ ಮನಸ್ಥಿತಿಯನ್ನು ತೋರಿಸಿದೆ ಎಂದಿದೆ.

Obscenity lies in eyes of beholder, Kerala HC,Grihalakshmi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ