ನವದೆಹಲಿ,ಜೂ.22- ಹೊಸ ಕಾನೂನಿನಡಿ ದೊಡ್ಡ ಮಟ್ಟದ ಬ್ಯಾಂಕ್ ಸಾಲ ಸುಸ್ತಿದಾರರ ವಿರುದ್ದ ಅಧಿಕೃತ ಕಠಿಣ ಕ್ರಮ ಕೈಗೊಳ್ಳಲು ಭಾರತ ಇನ್ನು ಮುಂದಾಗಿದೆ. ಹಲವಾರು ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಕೋಟಿಗಟ್ಟಲೇ ಸಾಲ ಪಡೆದು ಉದ್ದೇಶಪೂರ್ವಕ ಸುಸ್ತಿದಾರನಾಗಿ ವಿದೇಶಕ್ಕೆ ಹಾರಿರುವ ಕಳಂಕಿತ ಮದ್ಯ ಉದ್ಯಮಿ ವಿಜಯ ಮಲ್ಯ ಅವರನ್ನು ದೇಶ ಭ್ರಷ್ಟ ತಪ್ಪಿತಸ್ಥ ಎಂದು ಘೋಷಿಸುವಂತೆ ಹಾಗೂ 12,500 ಕೋಟಿ ರೂ. ಮೊತ್ತದ ಆಸ್ತಿಯನ್ನು ಜಪ್ತಿ ಮಾಡುವಂತೆ ಜಾರಿ ನಿರ್ದೇಶನಾಲಯ ನ್ಯಾಯಾಲಯವೊಂದಕ್ಕೆ ಇಂದು ಮನವಿ ಸಲ್ಲಿಸಿದೆ.
ಈ ಸಂಬಂಧ ಇತ್ತೀಚೆಗೆ ಜಾರಿಯಾದ ಘೋಷಿತ ಪಲಾಯನ ಆರ್ಥಿಕ ತಪ್ಪಿತಸ್ಥರ ಸುಗ್ರೀವಾಜ್ಞೆ ನಿಯಮದಡಿ ಇಡಿ ಅಧಿಕಾರಿಗಳು ಮುಂಬೈ ನ್ಯಾಯಾಲಯವೊಂದಕ್ಕೆ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಉದ್ದೇಶಪೂರ್ವಕ ಸುಸ್ತಿದಾರ ಎಂಬ ಕಳಂಕ ಹೊತ್ತಿರುವ ವಿಜಯ್ ಮಲ್ಯಗೆ ಈ ಬೆಳವಣಿಗೆಯಿಂದ ಮತ್ತಷ್ಟು ಕಂಟಕವಾಗುವುದಲ್ಲದೆ 12,500 ಕೋಟಿ ರೂ. ಆಸ್ತಿ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ.